ಎಸ್ಸೆಸ್ಸೆಲ್ಸಿಯ ಇಂದಿನ ಪರೀಕ್ಷೆಗೆ 302 ಗೈರು: ನಕಲು ಮಾಡಿದ ನಾಲ್ಕು ವಿದ್ಯಾರ್ಥಿಗಳು ಡಿಬಾರ್

ಎಸ್ಸೆಸ್ಸೆಲ್ಸಿಯ ಇಂದಿನ ಪರೀಕ್ಷೆಗೆ 302 ಗೈರು: ನಕಲು ಮಾಡಿದ ನಾಲ್ಕು ವಿದ್ಯಾರ್ಥಿಗಳು ಡಿಬಾರ್

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಉತ್ತಮ ರೀತಿಯಲ್ಲಿ ನಡೆದಿದ್ದು, ಇಂದಿನ ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ 28,095 ವಿದ್ಯಾರ್ಥಿಗಳು ಹಾಜರಾಗಿದ್ದರು ಮತ್ತು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ 302 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ತಿಳಿಸಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ 7 ತಾಲೂಕುಗಳ 101 ಪರೀಕ್ಷಾ ಕೇಂದ್ರಗಳಲ್ಲಿ ನಿಯಮಾನುಸಾರ ಪರೀಕ್ಷೆ ನಡೆದಿವೆ. ಜಾಗೃತ ದಳದ ಅಧಿಕಾರಿಗಳು ನಕಲು ತಡೆಯಲು ತಪಾಸಣೆ ಕೈಗೊಂಡಿದ್ದಾರೆ. 

ಇಂದಿನ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಹುಬ್ಬಳ್ಳಿ ಶಹರದ ಅಂಜುಮನ್ ಉರ್ದು ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಮತ್ತು ಹುಬ್ಬಳ್ಳಿ ಶಹರದ ಡಾ.ಜಿ.ವಿ.ಜೋಶಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಓರ್ವ ವಿದ್ಯಾರ್ಥಿ ಹಾಗೂ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಕುಸುಗಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಓರ್ವ ವಿದ್ಯಾರ್ಥಿ ಸೇರಿ ಒಟ್ಟು ನಾಲ್ಕು ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಡಿಬಾರ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.