ಪ್ರವಾಹ ಭೀತಿಯಲ್ಲಿವೆ ಸಿಲಿಕಾನ್ ಸಿಟಿಯ 209 ಪ್ರದೇಶಗಳು: ಮಳೆ ಹಾನಿ ತಡೆಗೆ ಸೂಕ್ತ ಕ್ರಮ

ಬೆಂಗಳೂರು: ಸಿಲಿಕಾನ್ ಸಿಟಿಯ 209 ಪ್ರದೇಶಗಳು ಪ್ರವಾಹ ಭೀತಿಯಲ್ಲಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಅದರಲ್ಲಿ 153 ಪ್ರದೇಶಗಳು ಸೂಕ್ಷ್ಮ ಹಾಗೂ 56 ಅತೀ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ.
ಈ ಪ್ರದೇಶದಲ್ಲಿ ಮಳೆ ಹಾನಿ ತಡೆಗೆ ಅಗತ್ಯ ಕಾಮಗಾರಿ ಕ್ರಮ ಕೈಗೊಳ್ಳಲಾಗಿದೆ. ಪ್ರವಾಹದ ಕುರಿತು ಮೊದಲೇ ಮಾಹಿತಿ ಪಡೆಯಲು 28 ಕಡೆ ರಾಜಕಾಲುವೆಗಳಲ್ಲಿ ಸೆನ್ಸಾರ್ ಅಳವಡಿಸಲಾಗಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿರುವುದು ತಿಳಿಯುತ್ತಿದ್ದಂತೆಯೇ ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸಹಾಯವಾಗಲಿದೆ.
ಮಳೆ ಬಂದಾಗ ಬೀಳುವ ಮರಗಳು, ಮುರಿದು ಬೀಳುವ ರೆಂಬೆ-ಕೊಂಬೆಗಳ ತೆರವಿಗೆ ವಿಧಾನಸಭಾ ಕ್ಷೇತ್ರವಾರು 28 ತಂಡಗಳನ್ನು ನಿಯೋಜಿಸಲಾಗಿದ್ದು, ತೆರವುಗೊಳಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ.
ಬೆಂಗಳೂರಿನಲ್ಲಿ ಮಳೆಯಾಗುವ ಪ್ರಮಾಣ, ಯಾವ ಪ್ರದೇಶದಲ್ಲಿ ಹೆಚ್ಚು ಮಳೆಯಾಗಲಿದೆ, ಪ್ರವಾಹ ಭೀತಿ ಉಂಟಾಗಲಿದೆ ಎಂಬುದನ್ನು ತಿಳಿಯಲು ರೆಡಾರ್ ಅಳವಡಿಕೆಗೆ 15 ಕೋಟಿ ರೂ .ವೆಚ್ಚ ಮಾಡಲಾಗುತ್ತಿದೆ. ಉಳಿದ 35 ಕೋಟಿ ರೂ ವೆಚ್ಚದಲ್ಲಿ ಪ್ರವಾಹ ಉಂಟಾಗುವ ಕಡೆ ಯೋಜನೆಗಳನ್ನು ರೂಪಿಸಲು ನಿರ್ಧರಿಸಲಾಗಿದೆ.