ಬೇಡ್ತಿ ನೀರಾವರಿ ಯೋಜನೆ ಎರಡನೇ ಹಂತಕ್ಕೆ 180 ಕೋಟಿ - ಸಚಿವರ ಕಾರ್ಯಕ್ಕೆ ರೈತರ ಮೆಚ್ಚುಗೆ

ಬೇಡ್ತಿ ನೀರಾವರಿ ಯೋಜನೆ ಎರಡನೇ ಹಂತಕ್ಕೆ 180 ಕೋಟಿ - ಸಚಿವರ ಕಾರ್ಯಕ್ಕೆ ರೈತರ ಮೆಚ್ಚುಗೆ

ಬೆಂಗಳೂರು: ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತದಲ್ಲಿ 107 ಕೆರೆಗಳನ್ನು ತುಂಬಿಸಲು ರಾಜ್ಯ ಸರ್ಕಾರ 180 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. 

ಈಗಾಗಲೇ ಸುಮಾರು 60 ಕೋಟಿ ವೆಚ್ಚದಲ್ಲಿ 40 ಕೆರೆಗಳನ್ನು ತುಂಬುವ ಕಾರ್ಯ ಸಚಿವ ಸಂತೋಷ್ ಲಾಡ್ ಅವರ ಅವಿರತ ಪ್ರಯತ್ನದಿಂದ ಪೂರ್ಣಗೊಂಡಿದ್ದು, ಇದೀಗ ಎರಡನೇ ಹಂತಕ್ಕೆ ಸರ್ಕಾರ ಹಣ ನೀಡಿದೆ. ಬಹು ನಿರೀಕ್ಷಿತ ಯೋಜನೆಗೆ ಸರ್ಕಾರ ಸ್ಪಂದಿಸಿರುವುದಕ್ಕೆ ಅನ್ನದಾತರು ಖುಷಿಗೊಂಡಿದ್ದು, ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ. 

ಕಲಘಟಗಿ ತಾಲೂಕಿನ ಮಹತ್ವಾಕಾಂಕ್ಷಿ ಬೇಡ್ತಿ ನದಿಯ ಏತ‌ ನೀರಾವರಿ ಯೋಜನೆಯ ಎರಡನೇ ಹಂತದ 107 ಕೆರೆಗಳನ್ನು ತುಂಬುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರದಿಂದ ಅನುಮೋದನೆ ಕೊಡಿಸಲು ಸಚಿವ ಲಾಡ್‌ ಅವರು ಸಾಕಷ್ಟು ಶ್ರಮಿಸಿದ್ದರು. ಕಲಘಟಗಿ-ಅಳ್ನಾವರ ಕ್ಷೇತ್ರದ ಶಾಸಕರಾದ ಸಂತೋಷ್ ಲಾಡ್ ಅವರು ತಾಲೂಕಿನ‌ ಅನ್ನದಾತರಿಗೆ ಕೊಟ್ಟ ಮಾತನ್ನು ಮತ್ತೊಮ್ಮೆ ಉಳಿಸಿಕೊಂಡಿದ್ದಾರೆ. 

ಬಹು ನಿರೀಕ್ಷಿತ ಯೋಜನೆಯ ಸಾಕಾರಕ್ಕೆ ಸಹಕಾರ ನೀಡುತ್ತಿರುವ ಸಿಎಂ ಮತ್ತು ಡಿಸಿಎಂ ಅವರಿಗೆ ಸಚಿವ ಲಾಡ್‌ ಅವರು ಧನ್ಯವಾದ ತಿಳಿಸಿದ್ದಾರೆ. 

ಸಚಿವ ಲಾಡ್‌ ಅವರ ಶ್ರಮದಿಂದ ಈ ಕಾರ್ಯ ಸಾಕಾರವಾಗಿದ್ದು, ಅಸಂಖ್ಯಾತ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ. ಕಲಘಟಗಿಯಂತಹ ನೀರಿನ ಕೊರತೆಯ ತಾಲೂಕಿಗೆ ಇಂತಹ ಯೋಜನೆ ಅವಶ್ಯವಾಗಿ ಬೇಕಾಗಿತ್ತು. ಇದೀಗ ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿದೆ. ಆಧುನಿಕ ಭಗೀರಥನಂತೆ ಸಚಿವ ಲಾಡ್‌ ಅವರು ನಮಗಾಗಿ ದುಡಿದಿದ್ದಾರೆ ಎಂದು ಕಲಘಟಗಿಯ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.