ರಷ್ಯಾ- ಉಕ್ರೇನ್ ವಾರ್ : ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ

ಕೀವ್ : ನಿಲ್ಲದ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಸದ್ಯ ರಷ್ಯಾವು ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು ಈಗ ಯುರೋಪ್ ನಲ್ಲಿಯೇ ಅತಿ ದೊಡ್ಡದಾದ ಉಕ್ರೇನ್ ನಲ್ಲಿರುವ ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾದ ಸೈನಿಕರು ದಾಳಿ ಮಾಡಿದ್ದಾರೆ. ಈ ದಾಳಿಯ ನಂತರ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಮಾಣು ಸ್ಥಾವರದ ಮೇಲೆ ರಷ್ಯಾದ ಸೈನ್ಯವು ಎಲ್ಲಾ ಕಡೆಯಿಂದ ಗುಂಡು ಹಾರಿಸುತ್ತಿದೆ ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ ಹೇಳಿದ್ದಾರೆ. ಅದು ಸ್ಫೋಟಗೊಂಡರೆ, ಅದು ಚೆರ್ನೋಬಿಲ್ಗಿಂತ 10 ಪಟ್ಟು ದೊಡ್ಡದಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ. 1986ರಲ್ಲಿ ಚರ್ನೋಬಿಲ್ ಪರಮಾಣು ಸ್ಥಾವರ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಸತ್ತಿದ್ದು ಕೆಲವೇ ನೂರಾರು ಜನರಾದರೂ, ಅದರ ಭೀಕರ ಪರಿಣಾಮಗಳಿಗೆ ತುತ್ತಾಗಿದ್ದು 5 ಲಕ್ಷಕ್ಕೂ ಹೆಚ್ಚು ಜನರು. ಈಗಲೂ ಅದರಿಂದ ಲಕ್ಷಾಂತರ ಜನರು ನರಳುತ್ತಿದ್ದಾರೆ. ಇನ್ನು ಎನರ್ಹೋಡರ್ ನಗರದ ಮೇಲೆ ರಷ್ಯಾ ದಾಳಿಯಿಂದ ಯುರೋಪಿನ ಅತಿದೊಡ್ಡ ಪರಮಾಣು ಶಕ್ತಿ ಕೇಂದ್ರದಿಂದ ಹೊಗೆ ಗೋಚರಿಸುತ್ತಿದೆ ಎಂದು ಉಕ್ರೇನಿಯನ್ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.