ನ.25 ರಿಂದ ಡಿ.2 ರವರೆಗೆ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಲಿಕಾ ಸೇತು-1 ಪರೀಕ್ಷಾ ಕಾರ್ಯಕ್ರಮ

ಧಾರವಾಡ: ನವೆಂಬರ್ 25 ರಿಂದ ಡಿಸೆಂಬರ್ 29 ರ ವರೆಗೆ ಪ್ರತಿದಿನ ಎರಡು ವಿಷಯಗಳಂತೆ ಧಾರವಾಡ ಜಿಲ್ಲೆಯಾದ್ಯಂತ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 06 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ತಿಳಿಯಲು ಹಾಗೂ ಮಕ್ಕಳು ಕಲಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಉದ್ದೇಶದಿಂದ ಕಲಿಕಾ ಸೇತು-1 ನ್ನು ನಡೆಸಲು ತಿಳಿಸಲಾಗಿತ್ತು. ಆದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ವಿಷಯವಾರು ಅಧ್ಯಯನ ಮಾಡಿಕೊಳ್ಳಲು ಅನುಕೂಲವಾಗುವಂತೆ ಪ್ರತಿ ದಿನ ಒಂದು ವಿಷಯದಂತೆ ನವೆಂಬರ್ 25 ರಿಂದ ಡಿಸೆಂಬರ್ 02 ರ ವರೆಗೆ ಕಲಿಕಾ ಸೇತು-1 ನ್ನು ನಡೆಸಲು ನಿರ್ಧರಿಸಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ನಿರ್ವಹಿಸಲು ಸೂಚಿಸಲಾಗಿದೆ. ಜಿಲ್ಲಾ ಕಚೇರಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಪರೀಕ್ಷಾ ದಿನಗಳಂದು ಬೆಳಿಗ್ಗೆ 8 ಗಂಟೆಗೆ ವಾಟ್ಸಪ್, ಮೇಲ್ ಮೂಲಕ ಕಳುಹಿಸಲಾಗುವ ಪ್ರಶ್ನೆ ಪತ್ರಿಕೆಗಳ ಪಿಡಿಎಫ್‍ಗಳನ್ನು ಶಾಲಾ ಹಂತದಲ್ಲಿ ಮುದ್ರಿಸಿಕೊಂಡು ಅಥವಾ ಪ್ರಶ್ನೆಗಳನ್ನು ಕಪ್ಪು ಹಲಗೆಯ ಮೇಲೆ ಬರೆದು ಪಾರದರ್ಶಕವಾಗಿ ಮೌಲ್ಯಾಂಕನ ಮಾಡಿ ಶಾಲಾ ಹಂತದಲ್ಲಿ ಫಲಿತಾಂಶವನ್ನು ವಿಶ್ಲೇಷಣೆ ಮಾಡಬೇಕು. ಎಲ್ಲ ಶಾಲೆಗಳ ಫಲಿತಾಂಶವನ್ನು ತಾಲೂಕಾ ಹಂತದಲ್ಲಿ ಕ್ರೋಢೀಕರಣ ಮಾಡಿ ಜಿಲ್ಲಾ ಕಚೇರಿಗೆ ನಿಗದಿತ ನಮೂನೆಯಲ್ಲಿ ಡಿಸೆಂಬರ್ 4 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಹಿತಿಗಾಗಿ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.