ನವದೆಹಲಿ : ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ರಾಕೇಶ್ ಟಿಕಾಯತ್ ಜೊತೆ ಚರ್ಚೆ

ನವದೆಹಲಿ : ಕಾಂಗ್ರೆಸ್ ವರಿಷ್ಠರ ಬುಲಾವ್ ಮೇರೆಗೆ ಇಂದು ಬೆಂಗಳೂರಿನಿಂದ ದೆಹಲಿಗೆ ಹೊರಟ ಸಿಎಂ ಸಿದ್ದರಾಮಯ್ಯ ಅವರು ಈಗ್ಗೆ ಸ್ವಲ್ಪ ಹೊತ್ತಿಗೂ ಮುನ್ನ ರಾಷ್ಟ ರಾಜಧಾನಿ ತಲುಪಿದರು. ದೆಹಲಿಯ ಕರ್ನಾಟಕ ಭವನ ತಲುಪುತ್ತಿದ್ದಂತೆಯೇ ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ಸಿಎಂ ಅವರನ್ನು ಸೇರಿಕೊಂಡರು.
ಸಚಿವರ ಕುರಿತು ಸಿಎಂಗೆ ಪತ್ರ ಬರೆದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದ ಶಾಸಕ ಬಿ.ಆರ್.ಪಾಟೀಲ್ ಕಳೆದ ಎರಡು ದಿನಗಳ ಹಿಂದೆಯೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಇದೇ ವೇಳೆ ಸಂಯುಕ್ತ ಕಿಸಾನ್ ಮೋರ್ಚಾದ ಅಧ್ಯಕ್ಷ ರಾಕೇಶ್ ಟಿಕಾಯತ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೆಲ ಹೊತ್ತು ಚರ್ಚಿಸಿದ್ದು ಮಹತ್ವದ್ದಾಗಿತ್ತು.
ಇಲ್ಲಿಂದ ನೇರವಾಗಿ ಟೆನ್ ಜನಪತ್ ಗೆ ತೆರಳಲಿರುವ ಸಿಎಂ ಜೊತೆ ಸಚಿವರಾದ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಮಹಾದೇವಪ್ಪ ಸೇರಿದಂತೆ ಮತ್ತಿತರರು ಸಿಎಂಗೆ ಸಾಥ್ ನೀಡಲಿದ್ದಾರೆ.
ಇನ್ನು ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಲಕ್ಷ್ಮಣ್ ಸವದಿ ಅವರು ಹಿಂದಿನ ದಿನವೇ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭೇಟಿ ಮಾಡಿದರು. ಇಂದು ಸಂಜೆ ಐದು ಗಂಟೆಗೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಹೈ ವೋಲ್ಟೇಜ್ ಮೀಟಿಂಗ್ ನಡೆಯಲಿದ್ದು, ರಾಜ್ಯದ 37 ಮಂದಿ ಸಚಿವರು, ಸಂಸದರು, ಮಾಜಿ ಶಾಸಕರು ಹಾಗೂ ಕೆಲ ಬೆರಳೆಣಿಕೆಯಷ್ಟು ಶಾಸಕರು ಹಾಜರಾಗಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯ ಕಾರ್ಯತಂತ್ರ ಹೆಣೆಯುವ ಉದ್ದೇಶದಿಂದ ಕಾಂಗ್ರೆಸ್ ಸಭೆ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.