ಕಾಂಗ್ರೆಸ್​​ ಶಾಸಕ ಜಮೀರ್ ಅಹ್ಮದ್​ ವಿರುದ್ಧ ಎಫ್ಐಆರ್ ದಾಖಲು

ಕಾಂಗ್ರೆಸ್​​ ಶಾಸಕ ಜಮೀರ್ ಅಹ್ಮದ್​ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ಕುಟುಂಬಸ್ಥರ ವಿರುದ್ಧ ನಿವೇಶನ ಕಬಳಿಕೆಗೆ ಯತ್ನಿಸಿರುವ ಆರೋಪ‌ ಕೇಳಿ ಬಂದಿದೆ. ಈ ಸಂಬಂಧ‌ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಅವರ ಸಹೋದರ ಜಮೀಲ್ ಅಹ್ಮದ್ ಖಾನ್ ಅವರು ತಮಗೆ ಮಾರಾಟ ಮಾಡಲಾಗಿದ್ದ ನಿವೇಶನಗಳನ್ನು ಕಬಳಿಸಲು ಯತ್ನಿಸಿದ್ದರು.‌ ಇದನ್ನು ಪ್ರಶ್ನಿಸಿದರೆ ಆತನ ಕಡೆಯವರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಜೆ.ಸಿ.ನಗರ ನಿವಾಸಿ ಶಾಹೀತಾ ನಾಸೀನ್ ಎಂಬುವರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ 7ನೇ ಎಸಿಎಂಎ ನ್ಯಾಯಾಲಯವು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಪಿಗೆಹಳ್ಳಿ ಪೊಲೀಸರಿಗೆ ನಿರ್ದೇಶನ ನೀಡಿದೆ. ಇದರ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅಹ್ಮದ್‌ ಖಾನ್‌ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.