ಬೀದರ್: ಆರ್‌ಪಿಎಫ್ ಸಿಬ್ಬಂದಿ ಗುಂಡಿಗೆ ಬೀದರ್ ವ್ಯಕ್ತಿ ಬಲಿ - ಪರಿಹಾರ ಘೋಷಣೆ

ಬೀದರ್: ಆರ್‌ಪಿಎಫ್ ಸಿಬ್ಬಂದಿ ಗುಂಡಿಗೆ ಬೀದರ್ ವ್ಯಕ್ತಿ ಬಲಿ - ಪರಿಹಾರ ಘೋಷಣೆ

ಬೀದರ್: ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಸೋಮವಾರ ನಡೆಸಿದ ಗುಂಡಿನ ದಾಳಿಯಲ್ಲಿ ಬೀದರ್ ಮೂಲದ ವ್ಯಕ್ತಿ ಸಾವನ್ನಪ್ಪಿದ್ದರು. ಕರ್ನಾಟಕ ಸರ್ಕಾರ ಮೃತ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದೆ. 

ಈ ಕುರಿತು ಅರಣ್ಯ ಸಚಿವ, ಬಾಲ್ಕಿ ಶಾಸಕ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ. ಫೇಸ್‌ಬುಕ್ ಪೋಸ್ಟ್ ಹಾಕಿರುವ ಸಚಿವರು, ಚಲಿಸುತ್ತಿದ್ದ ಜೈಪುರ- ಮುಂಬೈ ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ ಆರ್‌ಪಿಎಫ್ ಪೇದೆ ಚೇತನ್ ಸಿಂಗ್ ಕ್ಷುಲ್ಲಕ ಕಾರಣಕ್ಕೆ ನಡೆಸಿದ ಗುಂಡಿನ ದಾಳಿಗೆ ಬೀದರ್ ಜಿಲ್ಲೆಯ ಗಾದಗಿ ಬಳಿಯ ಹಮಿಲಾಪುರದ ಮುಗ್ದ ಪ್ರಯಾಣಿಕ ಸೈಯದ್ ಸೈಫುದ್ದೀನ್ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

ಮೃತ ವ್ಯಕ್ತಿಯ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರವನ್ನು ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ನೀಡಲು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ. ಮೃತರ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ನೀಡಲಿ. ಈ ನೋವಿನ ಸಂದರ್ಭದಲ್ಲಿ ನಾವು ಅವರ ಜೊತೆಗೆ ಇರುತ್ತೇವೆ ಎಂದು ಸಂತಾಪ ಸೂಚಿಸಿದ್ದಾರೆ. 

ನಾಲ್ವರ ಸಾವು ಸೋಮವಾರ ಮುಂಜಾನೆ ಮಹಾರಾಷ್ಟ್ರದ ಪಾಲ್ಫರ್ ರೈಲು ನಿಲ್ದಾಣದ ಬಳಿ ಆರ್‌ಪಿಎಫ್‌ ಕಾನ್ಸ್‌ಟೇಬಲ್ ಚೇತನ್ ಸಿಂಗ್ ಗುಂಡಿನ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಆರ್‌ಪಿಎಫ್‌ನ ಮತ್ತೊಬ್ಬ ಸಿಬ್ಬಂದಿ, ಅವರ ಎಸ್ಕಾರ್ಟ್‌ ಡ್ಯುಟಿ ಇನ್‌ಚಾರ್ಜ್ ಎಎಸ್‌ಐ ಟಿಕಾ ರಾಮ್ ಮೀನಾ ಹಾಗೂ ರೈಲಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರು ಸೇರಿ ನಾಲ್ವರು ಮೃತಪಟ್ಟಿದ್ದರು. 

ಈ ಘಟನೆಯ ಬಳಿಕ ಬಂದೂಕು ಸಮೇತವಾಗಿ ಆರ್‌ಪಿಎಫ್‌ ಕಾನ್ಸ್‌ಟೇಬಲ್ ಚೇತನ್ ಸಿಂಗ್ ಬಂಧಿಸಲಾಗಿತ್ತು. ಈ ಘಟನೆಯಲ್ಲಿ ಮೃತಪಟ್ಟ ಪ್ರಯಾಣಿಕರಲ್ಲಿ ಸೈಯದ್ ಸೈಫುದ್ದೀನ್ ಸಹ ಒಬ್ಬರು. ಈಗ ಕರ್ನಾಟಕ ಸರ್ಕಾರ ಸೈಯದ್ ಸೈಫುದ್ದೀನ್ ಕುಟುಂಬಕ್ಕೆ ಪರಿಹಾರವನ್ನು ಘೋಷಣೆ ಮಾಡಿದೆ. 

ಜೈಪುರ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 12956 ಪಾಲ್ಫರ್ ರೈಲು ನಿಲ್ದಾಣವನ್ನು ದಾಟಿದ ಬಳಿಕ ಚಲಿಸುತ್ತಿದ್ದ ರೈಲಿನಲ್ಲಿಯೇ ಕಾನ್ಸ್‌ಟೇಬಲ್ ಚೇತನ್ ಸಿಂಗ್ ಸ್ವಯಂ ಚಾಲಿತ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದ. 

ತನ್ನ ಹಿರಿಯ ಅಧಿಕಾರಿ ಮೇಲೆ ಗುಂಡು ಹಾರಿಸಿದ ಬಳಿಕ ಮತ್ತೊಂದು ಬೋಗಿಗೆ ಹೋಗಿ ಪ್ರಯಾಣಿಕರ ಮೇಲೆ ಗುಂಡು ಹಾರಿಸಿದ್ದ. ಬಳಿಕ ರೈಲಿನ ಚೈನ್ ಎಳೆದು ದಹಿಸರ್ ನಿಲ್ದಾಣದ ಬಳಿ ರೈಲಿನಿಂದ ಹೊರಗೆ ಜಿಗಿದಿದ್ದ. ಪಶ್ಚಿಮ ರೈಲ್ವೆ ಈ ಕುರಿತು ಪ್ರಕಟಣೆ ಸಹ ಬಿಡುಗಡೆ ಮಾಡಿತ್ತು.