ನಿರಂತರವಾಗಿ ಡೀಸೆಲ್ ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರ; 11 ದಿನಗಳಲ್ಲಿ 6 ಬಾರಿ ಬೆಲೆ ಹೆಚ್ಚಳ

ನಿರಂತರವಾಗಿ ಡೀಸೆಲ್ ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರ; 11 ದಿನಗಳಲ್ಲಿ 6 ಬಾರಿ ಬೆಲೆ ಹೆಚ್ಚಳ

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಇಳಿಕೆ ಆಗುತ್ತಿದೆ. ಆದಾಗ್ಯೂ ಕೇಂದ್ರ ಸರ್ಕಾರ ತೈಲ ದರ ಹೆಚ್ಚಳ ಮಾಡುತ್ತಲೇ ಇದೆ. ಬೆಲೆ ಏರಿಕೆಗೆ ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶನಿವಾರ ಮತ್ತೊಮ್ಮೆ ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿದೆ. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ. 

ಬಹಳ‌ ಹಿಂದಿನಿಂದಲೂ ಇದು ನಡೆದುಕೊಂಡ ಬಂದಿರುವ ರೀತಿ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ‌ ಸತ್ಸಂಪ್ರದಾಯವನ್ನು ಮರೆತಿದೆ. ಜುಲೈ 18ರಂದು ಮತ್ತೆ ಪ್ರತಿ‌ ಲೀಟರ್ ಡೀಸೆಲ್ ಮೇಲೆ 17 ಪೈಸೆ ಹೆಚ್ಚಳ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಆಗುತ್ತಲೇ ಇದೆ. 

ಜೂನ್ ತಿಂಗಳಲ್ಲಿ ಬರೊಬ್ಬರಿ 23 ದಿನ‌ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗಿತ್ತು. ಈಗ ಕಳೆದ ಹನ್ನೊಂದು ದಿನಗಳಲ್ಲಿ ಆರನೇ ಬಾರಿಗೆ ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ. 

ಮೊದಲು ಜುಲೈ 7ರಂದು ಪ್ರತಿ ಲೀಟರ್ ಡೀಸೆಲ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿತ್ತು. ಜುಲೈ 12ರಂದು ಮತ್ತೆ 16 ಪೈಸೆ ಬೆಲೆ ಏರಿಕೆ ಮಾಡಲಾಗಿತ್ತು. ಜುಲೈ 13ರಂದು ಪ್ರತಿ ಲೀಟರ್ ಡೀಸೆಲ್ ಗೆ 11 ಪೈಸೆ ಹೆಚ್ಚಳ ಮಾಡಲಾಗಿತ್ತು. ಜುಲೈ 15ರಂದು ಮತ್ತೆ ಪ್ರತಿ ಲೀಟರ್ ಡೀಸೆಲ್ ಗೆ 13 ಪೈಸೆ ಹೆಚ್ಚಳ ಮಾಡಲಾಗಿತ್ತು. ಜುಲೈ 17ರಂದು 17 ಪೈಸೆ ಬೆಲೆ ಏರಿಸಲಾಗಿತ್ತು. ಈಗ ಜುಲೈ 18ರಂದು ಮತ್ತೆ ಪ್ರತಿ‌ ಲೀಟರ್ ಡೀಸೆಲ್ ಮೇಲೆ 17 ಪೈಸೆ ಹೆಚ್ಚಳ ಮಾಡಲಾಗಿದೆ. 

ಕಳೆದ ಒಂದು ತಿಂಗಳಿನಿಂದ ಪ್ರತಿ ಲೀಟರ್ ಡೀಸೆಲ್ ಗೆ ಒಟ್ಟು 12 ರೂಪಾಯಿ ಹೆಚ್ಚಳ ಮಾಡಿದಂತಾಗಿದೆ. ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈ ರೀತಿ ಇವೆ. 

ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ -ಡೀಸೆಲ್ ಬೆಲೆ 
ಭೂಪಾಲ್- ಪೆಟ್ರೋಲ್ 88.08 ರೂ., ಡೀಸೆಲ್ 80.86 ರೂ. 
ಮುಂಬೈ- ಪೆಟ್ರೋಲ್ 87.19 ರೂ., ಡೀಸೆಲ್ 79.75 ರೂ. 
ಚೆನ್ನೈ- ಪೆಟ್ರೋಲ್ 83.63 ರೂ., ಡೀಸೆಲ್ 78.59 ರೂ. 
ಪಾಟ್ನಾ- ಪೆಟ್ರೋಲ್ 83.31ರೂ., ಡೀಸೆಲ್ 78.25 ರೂ. 
ಬೆಂಗಳೂರು- ಪೆಟ್ರೋಲ್ 83.02 ರೂ., ಡೀಸೆಲ್ 77.07 ರೂ. 
ಕೋಲ್ಕತ್ತಾ- ಪೆಟ್ರೋಲ್ 82.10 ರೂ., ಡೀಸೆಲ್ 76.63 ರೂ. 
ಲಕ್ನೋ- ಪೆಟ್ರೋಲ್ 80.98 ರೂ., ಡೀಸೆಲ್ 73.39ರೂ. 
ದೆಹಲಿ- ಪೆಟ್ರೋಲ್ 80.43 ರೂ., ಡೀಸೆಲ್ 81.52 ರೂ. 
ರಾಂಚಿ- ಪೆಟ್ರೋಲ್ 80.29 ರೂ., ಡೀಸೆಲ್ 77.42 ರೂ.