ಪ್ರಾಫಿಟ್ ಬುಕ್ಕಿಂಗ್, ಕೊರೊನಾ ಆತಂಕ, ಒಂದೇ ದಿನ 930 ಅಂಕ ಕುಸಿದ ಸೆನ್ಸೆಕ್ಸ್

ಪ್ರಾಫಿಟ್ ಬುಕ್ಕಿಂಗ್, ಕೊರೊನಾ ಆತಂಕ, ಒಂದೇ ದಿನ 930 ಅಂಕ ಕುಸಿದ ಸೆನ್ಸೆಕ್ಸ್

ಹೊಸದಿಲ್ಲಿ: ನಾಗಾಲೋಟದಲ್ಲಿದ್ದ ಷೇರು ಮಾರುಕಟ್ಟೆ ಸೂಚ್ಯಂಕಗಳು ಬುಧವಾರ ಭಾರೀ ಕುಸಿತ ಕಂಡಿವೆ. 72,000 ಮಟ್ಟವನ್ನು ದಾಟುವ ಮೂಲಕ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದ ಸೆನ್ಸೆಕ್ಸ್‌ 900 ಅಂಕಗಳಿಗಿಂತಲೂ ಹೆಚ್ಚು ಇಳಿಕೆ ಕಂಡಿದೆ. ಇದೇ ವೇಳೆ ನಿಫ್ಟಿ 50 ಸೂಚ್ಯಂಕ ಕೂಡ ಗರಿಷ್ಠ ಮಟ್ಟದಿಂದ ಸುಮಾರು 300 ಅಂಕ ಕುಸಿತ ಕಂಡಿದೆ.

ಕಳೆದ ಹಲವು ದಿನಗಳಿಂದ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಪ್ರಾಫಿಟ್‌ ಬುಕ್ಕಿಂಗ್‌ಗೆ ನಿರ್ಧರಿಸಿದರು. ಇದು ಷೇರುಪೇಟೆ ಸೂಚ್ಯಂಕಗಳು ಕುಸಿತ ಕಾಣಲು ಪ್ರಮುಖ ಕಾರಣವಾಗಿವೆ. ಇದೇ ವೇಳೆ ದೇಶದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಮತ್ತೆ ಕಾಣಿಸಿಕೊಂಡಿರುವುದು ಕೂಡ ಈ ಇಳಿಕೆಗೆ ಕೊಡುಗೆ ನೀಡಿದೆ.

ದಿನದಂತ್ಯಕ್ಕೆ ಸೆನ್ಸೆಕ್ಸ್‌ 930.88 ಅಂಕ ಅಥವಾ ಶೇ. 1.30ಯಷ್ಟು ಇಳಿಕೆ ಕಂಡು 70,506.31 ಮಟ್ಟದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಇನ್ನೊಂದೆಡೆ ನಿಫ್ಟಿ 50 ಸೂಚ್ಯಂಕವು 302.95 ಅಂಕ ಅಥವಾ ಶೇ. 1.41ರಷ್ಟು ಕುಸಿತ ಕಂಡು 21,150.15ರಲ್ಲಿ ದಿನದ ವಹಿವಾಟು ಮುಗಿಸಿದೆ.

ನಿಫ್ಟಿ ಮಿಡ್‌ಕ್ಯಾಪ್ ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ ಸೂಚ್ಯಂಕಗಳಲ್ಲಿ ಕುಸಿತವು ತೀವ್ರವಾಗಿತ್ತು. ಇವೆರಡೂ ಶೇ. 2ರಷ್ಟು ಇಳಿಕೆ ಕಂಡಿವೆ. ಎಫ್‌ಎಂಸಿಜಿ ಮಾತ್ರ ಹಸಿರು ಬಣ್ಣದಲ್ಲಿ ವಹಿವಾಟು ನಡೆಸಿದ್ದು, ಬ್ಯಾಂಕ್ಸ್‌ ಮತ್ತು ಐಟಿ ಸೂಚ್ಯಂಕಗಳು ಸುಮಾರು ಶೇ. 0.5ರಷ್ಟು ಇಳಿಕೆ ಕಂಡಿವೆ. ಆಟೋ, ಮಾಧ್ಯಮ, ಲೋಹ, ಪಿಎಸ್‌ಯು ಬ್ಯಾಂಕ್ಸ್‌ ಮತ್ತು ರಿಯಾಲ್ಟಿ ಷೇರುಗಳಲ್ಲಿ ಕುಸಿತವು ತೀವ್ರವಾಗಿತ್ತು.

ಶೇಕಡಾವಾರು ಲೆಕ್ಕದಲ್ಲಿ ನಿಫ್ಟಿಯಲ್ಲಿನ ಇಂದಿನ ಕುಸಿತವು ಅಕ್ಟೋಬರ್ 26ರ ನಂತರದ ಅತಿದೊಡ್ಡ ಏಕದಿನ ನಷ್ಟವಾಗಿದೆ. ಕಳೆದ ಒಂದು ತಿಂಗಳಲ್ಲಿ ಸೂಚ್ಯಂಕವು ಸುಮಾರು 1,500 ಅಂಕ ಅಥವಾ ಶೇ. 7.6ರಷ್ಟು ಏರಿಕೆ ಕಂಡಿತ್ತು. ನವೆಂಬರ್ 2023 ನಿಫ್ಟಿ ಪಾಲಿಗೆ ಉತ್ತಮ ತಿಂಗಳಾಗಿತ್ತು.

ನಿಫ್ಟಿ 500 ಪ್ಯಾಕ್‌ನೊಳಗೆ, ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್, ಇಂಡಸ್ ಟವರ್ಸ್, ಎಸ್‌ಜೆವಿಎಲ್‌, ಅಲೋಕ್ ಇಂಡಸ್ಟ್ರೀಸ್, ಇರ್ಕಾನ್‌, ರಾಜೇಶ್ ಎಕ್ಸ್‌ಪೋರ್ಟ್ಸ್ ಮತ್ತು ಸೆಂಟ್ರಲ್ ಬ್ಯಾಂಕ್ ತಲಾ ಶೇ. 6-7ರಷ್ಟು ಇಳಿಕೆ ಕಂಡಿದ್ದು, ಗರಿಷ್ಠ ನಷ್ಟ ಅನುಭವಿಸಿದ ಷೇರುಗಳಾಗಿವೆ. ಅದಾನಿ ಪೋರ್ಟ್ಸ್ ಮತ್ತು ಅದಾನಿ ಎಂಟರ್‌ಪ್ರೈಸಸ್ ಕೂಡ ಭಾರೀ ನಷ್ಟ ಅನುಭವಿಸಿವೆ.ಒಎನ್‌ಜಿಸಿ, ಟಾಟಾ ಕನ್ಸ್ಯೂಮರ್ ಮತ್ತು ಬ್ರಿಟಾನಿಯಾ ತಲಾ ಶೇ. 2-3ರಷ್ಟು ಲಾಭ ಗಳಿಸುವಲ್ಲಿ ಯಶಸ್ವಿಯಾಗಿವೆ.

ಭಾರತದಲ್ಲಿ ಕೋವಿಡ್ ಜೆಎನ್‌.1 ತಳಿಯ ಪ್ರಕರಣಗಳು ಹೆಚ್ಚುತ್ತಿರುವುದು ಷೇರು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಕೇರಳದಲ್ಲಿ ನಿನ್ನೆ 292 ಹೊಸ ಕೋವಿಡ್‌-19 ಸಕ್ರಿಯ ಪ್ರಕರಣಗಳು ಮತ್ತು 3 ಸಾವುಗಳನ್ನು ವರದಿಯಾಗಿವೆ. ಮಂಗಳವಾರ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಆರೋಗ್ಯ ಸೌಲಭ್ಯಗಳ ಸನ್ನದ್ಧತೆಯನ್ನು ಪರಿಶೀಲಿಸಿದ್ದಲ್ಲದೆ, ಕೊರೊನಾ ವೈರಸ್‌ನ ತಳಿಗಳ ವಿರುದ್ಧ ಎಚ್ಚರಿಕೆ ವಹಿಸುವಂತೆಯೂ ಒತ್ತಿ ಹೇಳಿದ್ದರು. ಹೀಗಿದ್ದೂ ಬುಧವಾರದ ವಹಿವಾಟಿನಲ್ಲಿ ಫಾರ್ಮಾ ಸೂಚ್ಯಂಕವೂ ಶೇ. 1ಕ್ಕಿಂತ ಹೆಚ್ಚು ನಷ್ಟಕ್ಕೀಡಾಗಿದೆ.

ಎಲ್ಲಾ ಜಾಗತಿಕ ಮತ್ತು ದೇಶೀಯ ಸೂಚಕಗಳು ಸಕಾರಾತ್ಮಕವಾಗಿಯೇ ಇದ್ದಾಗಲೂ ಈ ರೀತಿಯ ಕುಸಿತ ಕಂಡಿರುವುದು ಮಾರುಕಟ್ಟೆಯಲ್ಲಿ ಭಾಗವಹಿಸುವವರನ್ನು ಆಶ್ಚರ್ಯಚಕಿತಗೊಳಿಸಿದೆ. ಜಪಾನ್‌ನ ನಿಕ್ಕಿ 225 ಶೇ. 1.5ರಷ್ಟು ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಲಂಡನ್‌ನ ಎಫ್‌ಟಿಎಸ್‌ಇ 100 ಶೇ. 1ರಷ್ಟು ಏರಿಕೆ ಕಂಡಿದೆ.