ಚೀನಾದಲ್ಲಿ ಪ್ರಬಲ ಭೂಕಂಪ 111 ಮಂದಿ ಸಾವು

ಬೀಜಿಂಗ್ : ಚೀನಾದ ಗನ್ಸು-ಕಿಂಗ್ಹೈ ಗಡಿ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿ 111 ಜನ ಸಾವನ್ನಪ್ಪಿ 230 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.
ಇನ್ನು ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.2 ದಾಖಲಾಗಿದೆ. ಗನ್ಸು ಪ್ರಾಂತ್ಯದ ಲಿಯುಗೌ ಟೌನ್‌ಶಿಪ್ ಬಳಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ ಎಂದು ಚೀನಾದ ಭೂಕಂಪನ ನೆಟ್‌ವರ್ಕ್ ಸೆಂಟರ್ ತಿಳಿಸಿದೆ. ಭೂಕಂಪದಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ನೀರಿನ ಸಮಸ್ಯೆ ಉಂಟಾಗಿದೆ. ಮನೆಗಳು, ರಸ್ತೆಗಳು ಸೇರಿದಂತೆ ಇತರ ಮೂಲಸೌಕರ್ಯಗಳು ಹಾನಿಗೊಳಗಾಗಿರುವುದರ ಕುರಿತು ಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭೂಕಂಪ ವಲಯದ ರಸ್ತೆ ಸಂಚಾರ ಮತ್ತು ಸರಕು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ರೈಲ್ವೆ ಹಳಿಗಳ ಸುರಕ್ಷತಾ ಪರಿಶೀಲನೆಗೆ ರೈಲ್ವೆ ಪ್ರಾಧಿಕಾರ ಆದೇಶಿಸಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಭೂಕಂಪ ಪ್ರದೇಶಗಳಲ್ಲಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದ್ದಾರೆ.