ಜಲ ವಿವಾದದಲ್ಲಿ ಕರ್ನಾಟಕದ ಪರ ವಕಾಲತ್ತು ವಹಿಸುತ್ತಿದ್ದ ವರ ವಕೀಲ ವಿಧಿವಶ - ಮೋದಿ, ಸಿದ್ದರಾಮಯ್ಯ ಸಂತಾಪ

ಜಲ ವಿವಾದದಲ್ಲಿ ಕರ್ನಾಟಕದ ಪರ ವಕಾಲತ್ತು ವಹಿಸುತ್ತಿದ್ದ ವರ ವಕೀಲ ವಿಧಿವಶ - ಮೋದಿ, ಸಿದ್ದರಾಮಯ್ಯ ಸಂತಾಪ

ನವದೆಹಲಿ: ಖ್ಯಾತ ಹಿರಿಯ ವಕೀಲ, ಭಾರತದ ಮಾಜಿ ಸಾಲಿಸಿಟರ್ ಜನರಲ್ ಫಾಲಿ ಎಸ್.ನಾರಿಮನ್ ಅವರು ಇಂದು ಬೆಳಗ್ಗೆ ದೆಹಲಿಯ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮತ್ತಿತರ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ. 

ನಾರಿಮನ್ ಅವರಿಗೆ 95 ವರ್ಷ ವಯಸ್ಸಾಗಿತ್ತು. ಬಾಂಬೆ ಹೈಕೋರ್ಟ್ ನಲ್ಲಿ ವಕೀಲರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ನಾರಿಮನ್ ಅವರು ಬಳಿಕ ದೆಹಲಿ ಹೈಕೋರ್ಟ್ ನತ್ತ ಮುಖ ಮಾಡಿದರು. ನಾರಿಮನ್ ಅವರ ಕಾನೂನು ಪಾಂಡಿತ್ಯ ಮತ್ತು ಅವರ ವೃತ್ತಿಪರತೆಯನ್ನು ಮನಗಂಡ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು 1972ರಲ್ಲಿ ಇವರನ್ನು ಭಾರತದ ಸಾಲಿಸಿಟರ್ ಜನರಲ್ ಹುದ್ದೆಗೆ ನೇಮಕ ಮಾಡಿದರು. ಈ ವೇಳೆ ಫಾಲಿ ಎಸ್.ನಾರಿಮನ್ ಅವರು ತಮ್ಮ ವಾಕ್ ಚಾತುರ್ಯ ಮತ್ತು ಪ್ರಕರಣಗಳನ್ನು ಭೇದಿಸುವ ವಿಶೇಷ ಜಾಣ್ಮೆಯಿಂದ ದೇಶಾದ್ಯಂತ ಹೆಸರು ಗಳಿಸುತ್ತಾರೆ. ಆದರೆ, 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ ಅದನ್ನು ವಿರೋಧಿಸಿ ತಮ್ಮ ಸಾಲಿಸಿಟರ್ ಜನರಲ್ ಹುದ್ದೆಗೆ ರಾಜೀನಾಮೆ ಕೊಟ್ಟು ಸುಪ್ರೀಂಕೋರ್ಟ್ ನಲ್ಲಿ ಸ್ವತಂತ್ರ ವಕೀಲರಾಗಿ ಮುಂದುವರಿಯುತ್ತಾರೆ. 

ನಾರಿಮನ್ ಅವರು ಕೋರ್ಟ್ ಹಾಲ್ ನಲ್ಲಿ ಕಾಲಿಟ್ಟರೆ ಸಾಕು ಪೀಠದಲ್ಲಿ ಆಸೀನರಾಗಿರುತ್ತಿದ್ದಂಥ ಕೆಲ ಜಡ್ಜ್ ಗಳಲ್ಲೂ ಏನೋ ಒಂಥರ ನಡುಕ ಉಂಟಾಗುತ್ತಿದ್ದರೆ, ಮತ್ತೆ ಕೆಲ ಜಡ್ಜ್ ಗಳಲ್ಲಿ ಅದೇನೋ ಉತ್ಸಾಹ ಚಿಮ್ಮುವಂತಾಗುತ್ತಿತ್ತು ಅನ್ನೋದು ವಕೀಲ ನಾರಿಮನ್ ಅವರ ಶಕ್ತಿ ಎಂಥದ್ದು ಅಂತಾ ಅರ್ಥವಾಗುವಂಥದ್ದು! 

ಇವರ ಸೇವೆಯನ್ನು ಗಮನಿಸಿ ಕೇಂದ್ರ ಸರ್ಕಾರ 1991 ರಲ್ಲಿ ಪದ್ಮಭೂಷಣ, 2007 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಾಂಗ್ರೆಸ್ ನಾಯಕರೂ ಆಗಿದ್ದ ಫಾಲಿ ನಾರಿಮನ್ ಅವರು ಖ್ಯಾತ ನೀರಾವರಿ ತಜ್ಞರೂ ಕೂಡ. ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಶತಮಾನಗಳಿಂದಲೂ ನಡೆದುಕೊಂಡು ಬಂದ ಕಾವೇರಿ ಜಲ ವಿವಾದ ಪ್ರಕರಣದಲ್ಲಿ ಹಲವು ದಶಕಗಳ ಕಾಲ ಕರ್ನಾಟಕದ ಪರ ವಕಾಲತು ವಹಿಸಿದವರೂ ಇದೇ ನಾರಿಮನ್ ಅವರು ಅನ್ನೋದು ಹೆಮ್ಮೆಯ ಸಂಗತಿ. 

ಫಾಲಿ ಎಸ್ ನಾರಿಮನ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮತ್ತಿತರ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.