ಮಂಗಳೂರು: ಕನ್ನಡ- ತುಳು ಸಾಹಿತ್ಯ, ಸಾಂಸ್ಕೃತಿಕ ಲೋಕದ ಅಮೂಲ್ಯ ರತ್ನ, ಜನಪದ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಇನ್ನಿಲ್ಲ

ಉಳ್ಳಾಲ:(ಮಂಗಳೂರು) ಕನ್ನಡ ಮತ್ತು ತುಳು ಭಾಷೆಯ ಉನ್ನತಿಗಾಗಿ ತನ್ನನ್ನು ಸಮರ್ಪಿಸಿಕೊಂಡ ಮೇರು ಸಾಹಿತಿ, ಹಿರಿಯ ವಿದ್ವಾಂಸ,ಕರಾವಳಿ ಕರ್ನಾಟಕದ ಯಕ್ಷಗಾನ, ಜಾನಪದ, ಭೂತಾರಾಧನೆ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ, ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕೃತಿಯನ್ನು ಹೊರತಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನನ್ಯವಾದುದನ್ನು ಸಾಧಿಸಿದ ಪ್ರೊ. ಅಮೃತ ಸೋಮೇಶ್ವರ(88) ಅವರು ವಯೋಸಹಜವಾಗಿ ಇಂದು ಬೆಳಗ್ಗೆ ಸ್ವಗೃಹ ಸೋಮೇಶ್ವರದ"ಒಲುಮೆ" ಯಲ್ಲಿ ಸಾವನ್ನಪ್ಪಿದ್ದಾರೆ.
ವಿಮರ್ಶಕರು, ಜ್ಞಾನಪೀಠ ಪ್ರಶಸ್ತಿಗೆ ಅರ್ಹವಾಗಿದ್ದ ಲೇಖಕ,ನಿಷ್ಠುರವಾದಿಯಾಗಿದ್ದ ಅಮೃತರು
ಕನ್ನಡ ಸಾಹಿತ್ಯದ ವಿವಿಧ ವಿಭಾಗಗಳಾದ ಕಥೆ, ಸಾಹಿತ್ಯ, ಕವನ, ಸಣ್ಣ ಕಥೆ, ಕಾದಂಬರಿ,ನಾಟಕ, ವ್ಯಕ್ತಿ ಚಿತ್ರಣ, ಜನಾಂಗದ ಪರಿಚಯ, ಸಾಹಿತ್ಯ ಪರಿಚಯ, ರೇಡಿಯೋ ರೂಪಕ, ನೃತ್ಯರೂಪಕ, ಸ್ವತಂತ್ರ ಗಾದೆ, ಶಬ್ಧ ಕೋಶ, ಸಂಸ್ಕೃತಿ ಚಿಂತನ, ವಚನ ಸಾಹಿತ್ಯ, ಕುಚೋದ್ಯ ಕೋಶ, ಅಂಕಣ ಲೇಖನ,ನವಸಾಕ್ಷರರಿಗೆ ಸಾಹಿತ್ಯ, ಯಕ್ಷಗಾನ ವಿಚಾರ ವಿಮರ್ಶೆ,ಸಂಪಾದನೆ,ಸಹ ಸಂಪಾದಿತ ಹಲವು ಕೃತಿಗಳನ್ನು ಹೊರತಂದಿದ್ದರು.
ತುಳುವಿನಲ್ಲಿ ಕವನ ಸಂಗ್ರಹ, ಪಾಡ್ದನ ಸಂಗ್ರಹ, ನಾಟಕ, ಅನುವಾದಿತ ಕಾವ್ಯ, ನೃತ್ಯ ರೂಪಕ, ರೇಡಿಯೋ ರೂಪಕ, ಅನುವಾದಿತ ನಾಟಕ, ತುಳು ಜಾನಪದ ಕುರಿತಾದ ಸಂಶೋಧನೆ, ಸ್ವತಂತ್ರ ಗಾದೆ, ಭಕ್ತಿಗೀತೆ, ಭಾವಗೀತೆಗಳ ಕೃತಿಗಳನ್ನು ಹೊರತಂದಿದ್ದಾರೆ.
ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಾಡಿನ ಕೀರ್ತಿ ಹೆಚ್ಚಿಸಿದ ಅಮೃತರನ್ನು ಮಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೨೦ ನೇ ಸಾಲಿನ "ಗೌರವಶ್ರೀ" ಪ್ರಶಸ್ತಿ,ಮಣಿಪಾಲ ಅಕಾಡೆಮಿಯ ಮಾಹೆ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಯಿಂದ ಸಂಘ ಸಂಸ್ಥೆಗಳ ಸನ್ಮಾನದಿಂದ ಪುರಸ್ಕೃತರಾಗಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೨೦ನೇ ಸಾಲಿನ "ಗೌರವಶ್ರೀ" ಪ್ರಶಸ್ತಿಯನ್ನು ಅವರ 86ನೇ ಹುಟ್ಟುದಿನದಂದು ಅವರ ಮನೆಯಲ್ಲಿಯೇ ಪ್ರದಾನ ಮಾಡಲಾಗಿತ್ತು. ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಏಳು ತುಳು ನಾಟಕಗಳನ್ನು ಬರೆದಿರುವ ಸೋಮೇಶ್ವರ್ ಅವರ 'ತಂಬಿಲಾ' ಮತ್ತು 'ರಂಗಿತಾ' ಪ್ರಮುಖ ಕಾವ್ಯ ಸಂಕಲನಗಳು. ಮನೆ ಭಾಷೆ ಮಲಯಾಳಂ ಆಗಿದ್ದರೂ ಕನ್ನಡ, ತುಳು ,ಸಾಹಿತ್ಯದಲ್ಲಿ ಕೃಷಿ ಮಾಡಿದ್ದಲ್ಲದೆ,ಕನ್ನಡದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದರು.
ಅಮೃತ ಸೋಮೇಶ್ವರರು ಧರ್ಮ ಪತ್ನಿ ನರ್ಮದಾ, ಮಕ್ಕಳಾದ ಚೇತನ್ ಸೋಮೇಶ್ವರ, ಜೀವನ್ ಸೋಮೇಶ್ವರ, ಸೊಸೆಯಂದಿರಾದ ರಾಜೇಶ್ವರಿ, ಸತ್ಯ ಜೀವನ್, ಮೊಮ್ಮಕ್ಕಳಾದ ಸೃಜನ್ ಸೋಮೇಶ್ವರ ಹಾಗೂ ಸೃಷ್ಟಿ ಸೋಮೇಶ್ವರ ಅವರನ್ನ ಅಗಲಿದ್ದಾರೆ.