ರಾಜ್ಯದಲ್ಲಿ ಹೆಚ್ಚಿದ ಕೊರೊನಾ ಭೀತಿ: ಇಂದಿನಿಂದ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ!

ರಾಜ್ಯದಲ್ಲಿ ಹೆಚ್ಚಿದ ಕೊರೊನಾ ಭೀತಿ: ಇಂದಿನಿಂದ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ!

ಮಡಿಕೇರಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಇಂದಿನಿಂದ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 

ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಮಾತಾನಾಡಿದ ಅವರು, ಕೇರಳದಲ್ಲಿ ಕೊರೊನಾ ವೈರಸ್ ರೂಪಾಂತರಿ ಜೆಎನ್.1 (JN.1) ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದ್ದು, ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಲಾಗುತ್ತಿದೆ. ಆದರೆ ಯಾವುದೇ ನಿರ್ಬಂಧ ಹೇರುವ ಯೋಚನೆ ಸದ್ಯಕ್ಕಿಲ್ಲ. ಕೊರೊನಾ ರೂಪಾಂತರಿ ಬಗ್ಗೆ ಯಾರೂ ಸಹ ಆತಂಕಪಡಬೇಕಿಲ್ಲ. ಆದರೆ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹೃದಯ ಸಂಬಂಧಿ ಸಮಸ್ಯೆ ಇದ್ರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದ್ದಾರೆ. 

ಈಗಾಗಲೇ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಸಜ್ಜು ಆಗುವಂತೆಯೂ ಸೂಚನೆ ನೀಡಲಾಗಿದೆ. ಹಾಗೆಯೇ ಗಡಿ ಜಿಲ್ಲೆಗಳಾದ ಕೊಡಗು, ಮಂಗಳೂರು, ಚಾಮರಾಜನಗರದ ಭಾಗದಲ್ಲಿ ಹೆಚ್ಚಿನ ನಿಗಾ ಇಡುವಂತೆ ಸೂಚನೆ ಕೋಡಲಾಗಿದೆ. ಕೇರಳದಿಂದ ಬರುವವರ ಮೇಲೆ ಹೆಚ್ಚು ಟೆಸ್ಟ್ ಮಾಡುವಂತೆ ಆದೇಶ ಮಾಡಿದ್ದೇವೆ ಎಂದು ಹೇಳಿದರು. 

ಹೆಚ್ಚು ಸೋಂಕು ಪತ್ತೆ ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಅಗತ್ಯವಿರುವ ಬೆಡ್, ಪಿಪಿಇ ಕಿಟ್, ಆಕ್ಸಿಜನ್ ಸಿದ್ಧವಾಗಿಡಲಾಗಿದೆ. ಶೀತ, ಜ್ವರ ಕೆಮ್ಮು ಇರುವವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು. ಹೆಚ್ಚು ಪಾಸಿಟಿವ್ ಬಂದರಷ್ಟೇ ನಿಷೇಧ, ನಿರ್ಬಂಧ ಇತ್ಯಾದಿ ಕ್ರಮಗಳ ಬಗ್ಗೆ ಯೋಚನೆ ಮಾಡುತ್ತೇವೆ. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ, ಯಾರೂ ಆತಂಕಪಡುವ ಅಗತ್ಯವಿಲ್ಲ. ಇನ್ನೂ 2-3 ದಿನಗಳಲ್ಲಿ ಅದರ ತೀವ್ರತೆ ಗೋತ್ತಾಗಲಿದೆ ಎಂದು ಹೇಳಿದರು.