ದೊಡ್ಡ ಗಾಯದ ಬಳಿಕ ಟೀಂ ಇಂಡಿಯಾಗೆ ರೋಚಕ ಕಮ್‌ಬ್ಯಾಕ್ ಬಿಚ್ಚಿಟ್ಟ ಕೆಎಲ್ ರಾಹುಲ್

ಐಪಿಎಲ್ 2023ರಲ್ಲಿ ಕೆಎಲ್ ರಾಹುಲ್ ಅವರ ಕ್ವಾಡ್ರೈಸ್ಪ್ ಸ್ನಾಯುವಿನ ಗಾಯವು ಅವರ 2023ರ ವಿಶ್ವಕಪ್ ಆಕಾಂಕ್ಷೆಗಳನ್ನು ಕಿತ್ತುಕೊಳ್ಳುವ ಭಯ ಹುಟ್ಟಿಸಿತ್ತು. ವಿಶ್ವಕಪ್‌ಗೆ ಫಿಟ್‌ನೆಸ್ ಖಚಿತಪಡಿಸಿಕೊಳ್ಳುವಲ್ಲಿ ಅವರು ಎದುರಿಸಿದ ಮಾನಸಿಕ ಮತ್ತು ದೈಹಿಕ ಸವಾಲುಗಳನ್ನು ಅವರು ಬಹಿರಂಗಪಡಿಸಿದ್ದಾರೆ.
"ಶಸ್ತ್ರಚಿಕಿತ್ಸೆ ಬಳಿಕ ಮೊದಲ ಮೂರು ಅಥವಾ ನಾಲ್ಕು ವಾರಗಳ ಕಾಲ ನಡೆಯಲು ಸಾಧ್ಯವಾಗಲಿಲ್ಲ. ವಾಕರ್ ಹಿಡಿದು ನಡೆದಾಡಿದೆ ಮತ್ತು ಆ ಸಮಯದಲ್ಲಿ ನಿಧಾನವಾಗಿ ಕ್ರಿಕೆಟ್‌ಗೆ ಸಿದ್ಧನಾಗಲು ಪ್ರಾರಂಭಿಸಿದೆ. ವಿಶ್ವಕಪ್‌ನ ಸಮಯದಲ್ಲಿ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಸಾಧ್ಯ ಎಂದು ಅಂದುಕೊಂಡಿರಲಿಲ್ಲ. ಅದನ್ನೇ ವೈದ್ಯರು ಕೂಡ ನನಗೆ ಹೇಳಿದ್ದರು. ಶಸ್ತ್ರಚಿಕಿತ್ಸೆಯ ಸಮಯದಿಂದ ಐದು ತಿಂಗಳು ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿಸಿದ್ದರು' ಎಂದು ಕೆ.ಎಲ್. ರಾಹುಲ್ ಹೇಳಿದರು.
“ಮೇ ತಿಂಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದೆ. ನಿಧಾನವಾಗಿ ಸುಧಾರಿಸಿಕೊಂಡು ಅಭ್ಯಾಸ ಆರಂಭಿಸಿದೆ. ವಿಶ್ವಕಪ್ ಆಡಲು ತಂಡದಲ್ಲಿ ಸ್ಥಾನ ಪಡೆಯುವುದಕ್ಕೂ ಮುನ್ನ ಕೆಲವು ಪಂದ್ಯಗಳನ್ನು ಆಡಬೇಕೆಂದು ಆಯ್ಕೆಗಾರರು ಬಯಸುತ್ತಾರೆ. ಇದರಿಂದ ಅವರಿಗೂ ನನ್ನ ಮೇಲೆ ವಿಶ್ವಾಸ ಮೂಡುತ್ತದೆ. ಆ ಸಮಯದಲ್ಲಿ ನಾನು ಹಾಗೆ ಇದ್ದೆ. ಈ ವೇಳೆ ಏಷ್ಯಾಕಪ್‌ನಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡೆ' ಎಂದು ಕೆ.ಎಲ್. ರಾಹುಲ್ ನೆನೆದರು.
ಕೆ.ಎಲ್.ರಾಹುಲ್ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಶತಕದೊಂದಿಗೆ ಕಮ್‌ಬ್ಯಾಕ್ ಮಾಡಿದರು. ವಿಶ್ವಕಪ್ ಟೂರ್ನಿಯ ಬಳಿಕ ನಡೆದ ದಕ್ಷಿಣ ಆಫ್ರಿಕಾ ಟೀಂ ಇಂಡಿಯಾವನ್ನು ಮುನ್ನಡೆಸಿ ODI ಸರಣಿ ಗೆಲುವಿಗೆ ಕಾರಣರಾದರು ಮತ್ತು ಮೊನ್ನೆಯಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ ಎಂಟನೇ ಶತಕವನ್ನು ಪೂರೈಸಿದರು.