ಧಾರವಾಡ ಜಿಲ್ಲೆಯಾದ್ಯಂತ 60 ದಿನ ತಂಬಾಕು ಮುಕ್ತ ಯುವ ಅಭಿಯಾನ - ಡಿಸಿ

ಧಾರವಾಡ: ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು, ಯುವಕರು ತಂಬಾಕು ಉತ್ಪನ್ನಗಳಿಗೆ, ಬೀಡಿ ಸಿಗರೇಟ್ ಸೇವನೆಗೆ ಅಂಟಿಕೊಳ್ಳದಂತೆ ನಗರಗಳಲ್ಲಿ, ಗ್ರಾಮಗಳಲ್ಲಿ ಹೆಚ್ಚಿನ ಅರಿವು ಜಾಗೃತಿ ಕಾರ್ಯಕ್ರಮ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜರುಗಿದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂಬಾಕು ಮುಕ್ತ ಯುವ ಅಭಿಯಾನವನ್ನು ಜಿಲ್ಲೆಯಾದ್ಯಂತ 60 ದಿನಗಳವರೆಗೆ ಆಚರಿಸಲಾಗುವುದು. 160 ಶಾಲೆ ಹಾಗೂ 20 ಗ್ರಾಮಗಳನ್ನು ಸಂಪೂರ್ಣ ತಂಬಾಕು ಮುಕ್ತಗೊಳಿಸುವ ಗುರಿ ಹೊಂದಲಾಗಿದ್ದು, ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಇಂದಿನ ದಿನಗಳಲ್ಲಿ ಯುವ ಸಮೂಹ ಹೆಚ್ಚು ತಂಬಾಕು ಸೇವನೆ, ಬೀಡಿ, ಸಿಗರೇಟು, ಗುಟ್ಕಾ ಚಟಗಳಿಗೆ ಅಂಟಿಕೊಳ್ಳುತ್ತಿದ್ದು, ಗ್ರಾಮ ಸಭೆಗಳಲ್ಲಿ, ಪಾಲಕರ ಸಭೆಯಲ್ಲಿ, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಸಹಯೋಗದಲ್ಲಿ, ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷ ಅಭಿಯಾನ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಎಲ್ಲ ಶಾಲೆ ಕಾಲೇಜುಗಳ ತಂಬಾಕು ಮುಕ್ತ ಶಾಲೆಯೆಂದು ಘೋಷಿಸಿದ ಬಗ್ಗೆ ಕಡ್ಡಾಯವಾಗಿ ಫಲಕ ಅಳವಡಿಸಬೇಕು. 20 ತಂಬಾಕು ಮುಕ್ತ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಗ್ರಾಮದ ಹಿರಿಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳ ಪಾಲಕರೊಂದಿಗೆ ಮಹಿಳಾ ಮಕ್ಕಳ ಇಲಾಖೆ, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ತಿಳಿಸಿದರು.
ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಅಂಗಡಿ ಮಾಲೀಕರು ಕಡ್ಡಾಯವಾಗಿ ಮಹಾನಗರ ಪಾಲಿಕೆಯಿಂದ 500 ರೂಪಾಯಿ ಭರಿಸಿ ಅನುಮತಿ ಪಡೆಯ ತಕ್ಕದ್ದು, ಇದರ ಬಗ್ಗೆ ಪಾಲಿಕೆ ಅಧಿಕಾರಿಗಳು, ವ್ಯಾಪಾರಸ್ಥರು ಜೊತೆ ಆರೋಗ್ಯ ಅಧಿಕಾರಿಗಳು ಸಭೆಯೊಂದರನ್ನು ನಡೆಸಿ ಹೆಚ್ಚಿನ ಜಾಗೃತಿ ಮೂಡಿಸತಕ್ಕದ್ದು ಎಂದರು.