ಶಿವಮೊಗ್ಗದ ಐತಿಹಾಸಿಕ ಫ್ರೀಡಂ ಪಾರ್ಕ್‌ಗೆ ಅಲ್ಲಮಪ್ರಭು ನಾಮಕರಣ - ಸರಕಾರಕ್ಕೆ ಸಚಿವ ಮಧು ಬಂಗಾರಪ್ಪ ಅಭಿನಂದನೆ

ಬೆಂಗಳೂರು: ವಚನ ಸಾಹಿತ್ಯದ ಮೂಲಕ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಸಾರಿದ ಶರಣ ಅಲ್ಲಮಪ್ರಭು ಅವರ ಹೆಸರನ್ನು ಶಿವಮೊಗ್ಗದ ಹೃದಯ ಭಾಗದಲ್ಲಿರುವ ಫ್ರೀಡಮ್ ಪಾರ್ಕ್‌ಗೆ ನಾಮಕರಣ ಮಾಡಲು ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
"ಶಿವಮೊಗ್ಗದ 46.32 ಎಕರೆ ವಿಸ್ತೀರ್ಣದ ಜೈಲು ಆವರಣದ ಮೈದಾನಕ್ಕೆ ಅಲ್ಲಮಪ್ರಭು ಹೆಸರು ನಾಮಕರಣ ಮಾಡುವ ಮೂಲಕ ಜಿಲ್ಲೆಯ ಜನತೆಯ ದಶಕಗಳ ಕನಸನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ನನಸು ಮಾಡಿದೆ," ಮಧು ಬಂಗಾರಪ್ಪ ಎಂದು ಹೇಳಿದ್ದಾರೆ.
"12ನೇ ಶತಮಾನದಲ್ಲಿಅನುಭವ ಮಂಟಪದ ಅಧ್ಯಕ್ಷರಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊದಲಿಗೆ ಈ ನೆಲದಲ್ಲಿ ಸ್ಥಾಪಿಸಿದ ಅಲ್ಲಮಪ್ರಭು ಅವರ ಹೆಸರನ್ನು ಶಿವಮೊಗ್ಗದ ಫ್ರೀಡಂ ಪಾರ್ಕ್ಗೆ ಇಡಬೇಕು ಎಂಬುದು ಜನತೆಯ ಒತ್ತಾಸೆಯಾಗಿತ್ತು. ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದಿಸಿರುವುದು ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ಪಡೆದುಕೊಳ್ಳುತ್ತದೆ ಎಂಬುದಕ್ಕೆ ಇದು ನಿದರ್ಶನ," ಎಂದು ಬಣ್ಣಿಸಿದ್ದಾರೆ.
"12ನೇ ಶತಮಾನದ ಒಬ್ಬ ಪ್ರಸಿದ್ಧ ಕವಿ, ತತ್ವಜ್ಞಾನಿ ಅಲ್ಲಮಪ್ರಭುಗಳು ಶಿಕಾರಿಪುರದ ಬಳ್ಳಿಗಾವೆಯವರು. ಅವರು ನಮ್ಮ ಶಿವಮೊಗ್ಗ ಜಿಲ್ಲೆಯವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಹೀಗಾಗಿ ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮಪ್ರಭು ಅವರ ಹೆಸರಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿತ್ತು. ಇದಕ್ಕಾಗಿ ಇಡೀ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.
ಸಮ ಸಮಾಜದ ಕಲ್ಪನೆಯ ಜತೆಗೆ ಮಹಿಳೆಯರಿಗೆ ಸಮಾನ ಗೌರವ ಸ್ಥಾನ ಮಾಡಲು ನೀಡಲು ಹೋರಾಟ ನಡೆಸಿದ, ಜಾತಿಯತೆಯ ನಿರ್ಮೂಲನೆಗೆ 12ನೇ ಶತಮಾನದಲ್ಲೇ ಕ್ರಾಂತಿ ಮಾಡಿದ ಮತ್ತು ತಮ್ಮ ವಚನಗಳ ಮೂಲಕ ಜಗತ್ತಿನ ಕಣ್ಣು ತೆರೆಸಿದ ಅಲ್ಲಮಪ್ರಭು ಅವರ ಆದರ್ಶಗಳು ಮುಂದಿನ ಯುವಪೀಳಿಗೆಗೆ ಮಾದರಿಯಾಗಬೇಕು. ಸರ್ಕಾರದ ನಿರ್ಧಾರ ಅತ್ಯಂತ ಸಮಯೋಚಿತವಾಗಿದೆ ಎಂದು
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಜನವರಿ, 12 ರಂದು ಶಿವಮೊಗ್ಗದ ಐತಿಹಾಸಿಕ ಫ್ರೀಡಂ ಪಾಕ್೯ನಲ್ಲಿ ನಡೆದ ಯುವನಿಧಿ ಕಾರ್ಯಕ್ರಮದ ವೇಳೆ ಅಲ್ಲಮಪ್ರಭು ಹೆಸರು ನಾಮಕರಣ ಮಾಡುವಂತೆ ವೇದಿಕೆಯಲ್ಲಿದ್ದ ಸಿ.ಎಂ ಹಾಗೂ ಡಿಸಿಎಂ ಅವರಿಗೆ ಮಧು ಬಂಗಾರಪ್ಪ ಮನವಿ ಮಾಡಿದ್ದರು.
"ಜನವರಿ 12ರಂದು ಇದೇ ಪಾರ್ಕ್‌ನಲ್ಲಿ ಆಯೋಜಿಸಿದ್ದ ಯುವನಿಧಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯ ಘೋಷಿಸಿದ್ದರು. ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ," ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಾಡಿನ ಎಲ್ಲ ಜನತೆಗೆ ಮತ್ತು ಬಸವತತ್ವ ಅನುಯಾಯಿಗಳಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.