ನವದೆಹಲಿ: ಕೇರಳ, ತಮಿಳುನಾಡಿನಲ್ಲಿ ಭಾರೀ ಮಳೆ ಸಾಧ್ಯತೆ ಯೆಲ್ಲೋ ಅಲರ್ಟ್ ಘೋಷಣೆ

ನವದೆಹಲಿ: ದೆಹಲಿಯಲ್ಲಿ ಮಾರ್ಚ್1 ರಿಂದ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಇನ್ನು, ಹಿಮಾಚಲಪ್ರದೇಶದಲ್ಲಿ ಹಿಮಪಾತವಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 120 ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಮಾರ್ಚ್ 2 ಹಾಗೂ 4 ರಂದು ಬಯಲು ಪ್ರದೇಶ ಹೊರತುಪಡಿಸಿ ಗುಡ್ಡಗಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬುಧವಾರ ಗೊಂಡಾಲಾದಲ್ಲಿ 6 ಸೆಂ.ಮೀ, ಕಲ್ಪಾದಲ್ಲಿ 5.5 ಸೆಂ.ಮೀ, ಖದ್ರಾಲ, ಕೀಲಾಂಗ್ ಹಾಗೂ ಕುಕುಮ್ಸೇರಿಯಲ್ಲಿ 4 ಸೆಂ.ಮೀ, ಕೋಠಿಯಲ್ಲಿ 3 ಸೆಂ.ಮೀ ಹಾಗೂ ಉದಯಪುರದಲ್ಲಿ 2 ಸೆಂ.ಮೀ ಹಿಮಪಾತವಾಗಿದೆ.
ಸ್ಕೈಮೆಟ್ ವರದಿ ಪ್ರಕಾರ ವಾಯುವ್ಯ ಭಾರತದಲ್ಲಿ ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿಗಳಷ್ಟು ಇಳಿಕೆಯಾಗಬಹುದು ಎಂದು ಹೇಳಲಾಗಿದೆ. ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು, ಕೇರಳ, ಲಕ್ಷದ್ವೀಪ, ಅಸ್ಸಾಂ, ಅರುಣಾಚಲಪ್ರದೇಶ, ಅಂಡಮಾನ್, ನಿಕೋಬಾರ್ ದ್ವೀಪಗಳಲ್ಲಿ ಮಳೆಯಾಗಲಿದೆ, ಅಷ್ಟೇ ಅಲ್ಲದೆ ಪಂಜಾಬ್ನಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ.
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮತ್ತೆ ಚಳಿಯ ವಾತಾವರಣ ಶುರುವಾಗಿದೆ. ಒಣಹವೆ ಮುಂದುವರೆಯಲಿದೆ. ಕಲಬುರಗಿಯಲ್ಲಿ 36.2 ಡಿಗ್ರಿ ಸೆಲ್ಸಿಯಸ್ ಅತಿ ಗರಿಷ್ಠ ಉಷ್ಣಾಂಶ, ಬಾಗಲಕೋಟೆಯಲ್ಲಿ 11.6 ಡಿಗ್ರಿ ಸೆಲ್ಸಿಯಸ್ ಅತಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.