ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಉಗಾಂಡಾ ಮೂಲದ ಡ್ರಗ್ ಪೆಡ್ಲರ್ ಅರೆಸ್ಟ್: ಎನ್.ಸಿ.ಬಿ ಕಾರ್ಯಾಚರಣೆ

ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಉಗಾಂಡಾ ಮೂಲದ ಡ್ರಗ್ ಪೆಡ್ಲರ್ ಅರೆಸ್ಟ್: ಎನ್.ಸಿ.ಬಿ ಕಾರ್ಯಾಚರಣೆ

ಹುಬ್ಬಳ್ಳಿ: ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಉಗಾಂಡಾ ಮೂಲದ ಡ್ರಗ್ ಪೆಡ್ಲರ್ ಮಹಿಳೆಯೊಬ್ಬಳನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸುವಲ್ಲಿ ಬೆಂಗಳೂರು ಎನ್​ಸಿಬಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹೌದು..‌ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿರುವ ಬೆಂಗಳೂರು ಎನ್​ಸಿಬಿ ಅಧಿಕಾರಿಗಳು ಸುಮಾರು 1.5 ಕೋಟಿ ರೂ. ಮೌಲ್ಯದ 995 ಗ್ರಾಂ ಡ್ರಗ್ಸ್ (Methamphetamine)​ ವಶಕ್ಕೆ ಪಡೆದಿದ್ದಾರೆ. ಮಾದಕ ವಸ್ತು ಸಾಗಿಸುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಬಂಧಿಸಿದ್ದಾರೆ. ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಶುಕ್ರವಾರ ಈ ಕಾರ್ಯಾಚರಣೆ ನಡೆದಿದೆ. ಉಗಾಂಡ ಮೂಲದ ಮಹಿಳೆಯು ದೆಹಲಿಯಿಂದ ​ ಡ್ರಗ್ಸ್​ ತರಿಸಿಕೊಂಡು ರಾಜ್ಯದಲ್ಲಿ ಮಾರಾಟಕ್ಕೆ ಮುಂದಾಗಿದ್ದಳು ಎಂದು ತಿಳಿದು ಬಂದಿದೆ. ಮಕ್ಕಳಿಗೆ ಆಹಾರವಾಗಿ ನೀಡಲಾಗುವ ಸೆರ್ಲಾಕ್​ನ ಎರಡು ಪ್ಯಾಕ್​ನಲ್ಲಿ​ ಇಟ್ಟು ಸಾಗಿಸಲಾಗುತ್ತಿತ್ತು. ಪ್ರತಿ ಪ್ಯಾಕ್​ನಲ್ಲಿ ಸುಮಾರು 500 ಗ್ರಾಂ ಮಾದಕ ವಸ್ತು ಪತ್ತೆಯಾಗಿದೆ. ಇದರ ಮೌಲ್ಯವು ಸುಮಾರು ಸುಮಾರು 1.5 ಕೋಟಿ ರೂ. ಎಂದು ತಿಳಿದು ಬಂದಿದೆ. ಸದ್ಯ ಡ್ರಗ್ಸ್​ ವಶಕ್ಕೆ ಪಡೆದು ಮಹಿಳೆಯನ್ನು ಬಂಧಿಸಿರುವ ಎನ್​ಸಿಬಿ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.