ಬಸ್‌, ಹಾಲು ಬೆನ್ನಲ್ಲೇ ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್‌ ಕೊಟ್ಟ ಸರ್ಕಾರ

ಬಸ್‌, ಹಾಲು ಬೆನ್ನಲ್ಲೇ ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್‌ ಕೊಟ್ಟ ಸರ್ಕಾರ

ಬೆಂಗಳೂರು: ಮೆಟ್ರೋ, ಬಸ್‌, ಹಾಲು ದರ ಏರಿಕೆ ಬೆನ್ನಲ್ಲೇ ಕರೆಂಟ್‌ ಶಾಕ್‌ ನೀಡಿದೆ. ಕಳೆದ ಕೆಲವು ತಿಂಗಳಿಂದ ವಿದ್ಯುತ್‌ ದರ ಏರಿಕೆ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇತ್ತು. ಇದೀಗ ಕೊನೆಗೂ ಅಧಿಕೃತವಾಗಿ ದರ ಪರಿಷ್ಕರಣೆ ಘೋಷಣೆಯಾಗಿದೆ. 

ಇದೀಗ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ ಇಂದು (ಮಾರ್ಚ್‌27) ಅಧಿಕೃತ ಆದೇಶ ಹೊರಡಿಸಿದ್ದು, ಇನ್ನು ಈ ಪರಿಷ್ಕೃತ ವಿದ್ಯುತ್ ದರ ಏಪ್ರಿಲ್‌ 1ರಿಂದಲೇ ಜಾರಿಗೆ ಬರಲಿದೆ. 

ಯೂನಿಟ್‍ಗೆ 49 ಪೈಸೆ ಏರಿಕೆ ಮಾಡುವಂತೆ ಡಿಸೆಂಬರ್ ಕೊನೆಯ ವಾರದಲ್ಲಿ ಎಸ್ಕಾಂಗಳು ಕೆಇಆರ್‌ಸಿ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರಸ್ತಾವನೆಯಂತೆ ಉತ್ಪಾದನೆಯ ಖರ್ಚು-ವೆಚ್ಚ ಮತ್ತು ನಿರ್ವಹಣೆಯ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹೀಗಾಗಿ ಇಂದು (ಮಾರ್ಚ್ 27) ಕೆಇಆರ್‌ಸಿ ಅಧಿಕೃತವಾಗಿ ಪ್ರತಿ ಯೂನಿಟ್ ವಿದ್ಯುತ್ಗೆ 36 ಪೈಸೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಏಪ್ರಿಲ್ 1 ರಿಂದಲೇ ಹೊಸ ದರ ಜಾರಿಯಾಗಲಿದ್ದು, ರಾಜ್ಯದ ಜನರಿಗೆ ವಿದ್ಯುತ್ ದರದ ಬಿಸಿ ತಟ್ಟಲಿದೆ. 

ಇತ್ತೀಚೆಗಷ್ಟೇ ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆ ಮಾಡಲಾಗಿತ್ತು. ಅದಕ್ಕೂ ಮುನ್ನ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರವೂ ಹೆಚ್ಚಿಸಲಾಗಿತ್ತು. ಹಾಗೇ ಮದ್ಯದ ದರ ಏರಿಕೆ. ಹೀಗೆ ಸಾಲು ಸಾಲು ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಇಂದು ಹಾಲು ಹಾಗೂ ಮೋಸರು ದರ ಏರಿಕೆ ಬಿಸಿ ಮುಟ್ಟಿದೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಕೂಡ ವಿದ್ಯುತ್ ಶಾಕ್ ಕೊಟ್ಟಿದೆ.