ಧಾರವಾಡ ಡಿಸಿ ದಿವ್ಯ ಪ್ರಭು ಅವರಿಗೆ ರಾಜ್ಯ ಸರ್ಕಾರದ ಅತ್ಯುತ್ತಮ ಡಿಸಿ ಪ್ರಶಸ್ತಿ

ಧಾರವಾಡ: ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅತ್ಯುತ್ತಮ ರೀತಿಯಲ್ಲಿ ತಲುಪಿಸಿರುವ ಮತ್ತು ಚಿತ್ರದುರ್ಗ ಹಾಗೂ ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾಗಿ ಉತ್ತಮವಾದ ಜನಸ್ನೇಹಿ, ನಾಗರಿಕಸ್ನೇಹಿ ಆಡಳಿತ ನೀಡಿರುವ ದಿವ್ಯ ಪ್ರಭು ಜಿ.ಆರ್.ಜೆ ಅವರಿಗೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಿಂದ 2023-24 ನೇ ಸಾಲಿನ ಉತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಪ್ರಕಟವಾಗಿದೆ.
ಇದರ ಜೊತೆಗೆ ಧಾರವಾಡ ತಹಶೀಲ್ದಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿ ರಾಕೇಶ ತಂಗಡಗಿ ಅವರಿಗೆ 2023-24ನೇ ಸಾಲಿಗೆ ವರ್ಷದ ಅತ್ಯುತ್ತಮ ಗ್ರಾಮ ಆಡಳಿತ ಅಧಿಕಾರಿ ಪ್ರಶಸ್ತಿ ಪ್ರಕಟವಾಗಿದೆ.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮತ್ತು ಗ್ರಾಮ ಆಡಳಿತಾಧಿಕಾರಿ ರಾಕೇಶ ತಂಗಡಗಿ ಅವರು ಪ್ರಸಕ್ತ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿಗಳಾಗಿ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಬರುವ ಸೆಪ್ಟೆಂಬರ್ 27 ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಕಂದಾಯ ಸಚಿವರ ಅಧ್ಯಕ್ಷತೆಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕಂದಾಯ ಇಲಾಖೆ ಪ್ರಕಟಣೆ ತಿಳಿಸಿದೆ. ಪ್ರಶಸ್ತಿ ಪುರಸ್ಕೃತ ಜಿಲ್ಲಾಧಿಕಾರಿಗಳನ್ನು ಮತ್ತು ಗ್ರಾಮ ಆಡಳಿತ ಅಧಿಕಾರಿಯನ್ನು ಜಿಲ್ಲೆಯ ಸಮಸ್ತ ಅಧಿಕಾರಿಗಳು, ನೌಕರರು ಅಭಿನಂದಿಸಿದ್ದಾರೆ.