12 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್

ನವದೆಹಲಿ: ಹೆಮ್ಮಾರಿ ಸೋಂಕಿನಿಂದ ಮಕ್ಕಳನ್ನು ಬಚಾವ್ ಮಾಡಲು 12 ರಿಂದ 18 ವರ್ಷದೊಳಗಿನವರಿಗೆ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಸಿಜಿಐ) ಅನುಮತಿ ನೀಡಿದೆ. ದೇಶದಲ್ಲಿ ಓಮಿಕ್ರಾನ್ ಸೊಂಕಿತರ ಸಂಖ್ಯೆ ಏರಿಕೆ ಕಾಣುತ್ತಿದ್ದಂತೆ ಮೂರನೇ ಅಲೆ ಬರುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ತಜ್ಞರು ಮೂರನೇ ಅಲೆ ಮಕ್ಕಳಿಗೆ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯ ತಿಳಿಸಿದ್ದರು. ಇದೀಗ ಮೂರನೇ ಅಲೆ ಪ್ರಾರಂಭದ ಹಂತದಲ್ಲೇ ಮಕ್ಕಳಿಗೆ ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ. ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಯ ಪರೀಕ್ಷೆ ನಡೆದಿದ್ದು, ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಸಂಬಂಧಿಸಿದ ದತ್ತಾಂಶವನ್ನು ಭಾರತ್ ಬಯೋಟೆಕ್ ಕಂಪನಿ ಡಿಸಿಜಿಐಗೆ ಸಲ್ಲಿಸಿತ್ತು. ಐಸಿಎಂಆರ್(Indian Council of Medical Research) ಮತ್ತು ಹೈದರಾಬಾದ್ ಮೂಲದ ಲಸಿಕೆ ತಯಾರಕ ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದ್ದು, ಭಾರತದ ಮೊದಲ ಸ್ಥಳೀಯ ಕೋವಿಡ್ -19 ಲಸಿಕೆ ಆಗಿದೆ. 12ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ತಜ್ಞರ ತಂಡ ಒಪ್ಪಿಗೆ ಸೂಚಿಸಿದೆ.