ಬೆಂಗಳೂರು: ಎಲ್ಲ ಜಿಲ್ಲೆಗಳಲ್ಲೂ ಆರ್ಟ್ ಗ್ಯಾಲರಿ, ವಸ್ತು ಸಂಗ್ರಹಾಲಯ ಸ್ಥಾಪನೆ- ಸಿಎಂ

ಬೆಂಗಳೂರು: ಚಿತ್ರಕಲೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಈ ಬಾರಿ ಚಿತ್ರ ಕಲಾ ಪರಿಷತ್ ಗೆ 50 ಲಕ್ಷ ರೂ. ಅನುದಾನವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಭಾನುವಾರ ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಆಯೋಜಿಸಲಾಗಿರುವ 21ನೇ ಚಿತ್ರಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಕಲೆ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದು ಪುನರ್ ಉಚ್ಚರಿಸಿದರು.
ಎಲ್ಲ ಜಿಲ್ಲೆಗಳಲ್ಲಿ ವಸ್ತು ಸಂಗ್ರಹಾಲಯ ಹಾಗೂ ಆರ್ಟ್ ಗ್ಯಾಲರಿ ಸ್ಥಾಪಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಾಯ ಮಾಡಲಿದೆ ಅಂತಾನೂ ಇದೇ ಸಂದರ್ಭದಲ್ಲಿ ಸಿಎಂ ತಿಳಿಸಿದರು.
2003 ರಿಂದ ಇಂದಿನವರೆಗೆ ಚಿತ್ರಸಂತೆ ಆಚರಣೆಯಾಗುತ್ತಿದ್ದು, ಈ ವರ್ಷ 21ನೇ ಚಿತ್ರಸಂತೆ ನಡೆದಿದೆ. ಈ ಹಿಂದೆಯೂ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿ ವರ್ಷವೂ ಚಿತ್ರಸಂತೆಯನ್ನು ಉದ್ಘಾಟಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿದರು.
ಈ ಬಾರಿ ಚಿತ್ರಸಂತೆಯನ್ನು ಬಾಹ್ಯಾಕಾಶ ವಿಜ್ಞಾನಿಗಳಿಗೆ ಸಮರ್ಪಣೆ ಮಾಡಿರುವುದು ಬಾಹ್ಯಾಕಾಶ ಕ್ಷೇತ್ರದ ಸಾಧಕರಿಗೆ ಸಲ್ಲಿಸಿರುವ ವಿಶೇಷವಾದ ಗೌರವವನ್ನು ಸೂಚಿಸುತ್ತದೆ ಅಂತಾ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವರಾದ ಹೆಚ್.ಕೆ.ಪಾಟೀಲ್ , ಸುಧಾಕರ್, ಶಾಸಕರಾದ ರಿಜ್ವಾನ್ ಅರ್ಷದ್, ಅಜಯ್ ಸಿಂಗ್ , ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್, ಉಪಾಧ್ಯಕ್ಷ ಪ್ರಭಾಕರ್ ಉಪಸ್ಥಿತರಿದ್ದರು. ಕುಮಾರಕೃಪಾ ರಸ್ತೆಯಲ್ಲಿ ಆಯೋಜಿಸಲಾಗಿರುವ ಚಿತ್ರ ಸಂತೆ ಉದ್ಘಾಟನೆಯ ವೇಳೆ ಡೊಳ್ಳು ವಾದ್ಯಗಳ ಸದ್ದು ಮೆರುಗು ನೀಡಿತು.