ಹಿರಿಯ ನಟ ರಾಜೇಶ್ ನಿಧನ

ಬೆಂಗಳೂರು: ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್(89) ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಫೆ.9ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿದ್ಯಾಸಾಗರ್ ಎಂಬ ಹೆಸರಿನಿಂದ ರಂಗಭೂಮಿಗೆ ಕಾಲಿಟ್ಟಿದ್ದ ರಾಜೇಶ್ ನಂತರ ಚಿತ್ರರಂಗಕ್ಕೆ ಬಂದಿದ್ದರು. ಇವರ ಮೂಲ ಹೆಸರು ಮುನಿ ಚೌಡಪ್ಪ ಎಂದಾಗಿತ್ತು. ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಸೇರಿದಂತೆ ಕನ್ನಡದ ಮೇರು ನಟರೊಂದಿಗೆ ಅವರು ನಟಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯವು ಇವರ ಕಲಾ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಶ್ರೀನಿ ನಟನೆಯ ಓಲ್ಡ್ ಮಾಂಕ್ ಚಿತ್ರ ಇವರ ಕೊನೆಯ ಸಿನಿಮಾ ಆಗಿದೆ.