ಮಹಾರಾಷ್ಟ್ರದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಲೈಸೆನ್ಸ್​ ರದ್ದು

ಮಹಾರಾಷ್ಟ್ರದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಲೈಸೆನ್ಸ್​ ರದ್ದು

ಮುಂಬೈ: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಜಾನ್ಸನ್ ಮತ್ತು ಜಾನ್ಸನ್ ಪ್ರೈವೇಟ್ ಲಿಮಿಟೆಡ್‌ನ ಬೇಬಿ ಪೌಡರ್ ಉತ್ಪಾದನಾ ಪರವಾನಗಿಯನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧಗಳ ಆಡಳಿತ ಶುಕ್ರವಾರ ರದ್ದುಗೊಳಿಸಿದೆ. 

ಕಂಪನಿಯ ಉತ್ಪನ್ನವಾದ ಜಾನ್ಸನ್ ಬೇಬಿ ಪೌಡರ್ ನವಜಾತ ಶಿಶುಗಳ ಚರ್ಮದ ಮೇಲೆ ಪರಿಣಾಮ ಬೀರಬಹುದು ಎಂದು ಮಹಾರಾಷ್ಟ್ರ ರಾಜ್ಯ ಸರ್ಕಾರಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯೋಗಾಲಯ ಪರೀಕ್ಷೆಯ ಸಮಯದಲ್ಲಿ ಶಿಶುಗಳಿಗೆ ಪುಡಿಯ ಮಾದರಿಗಳು ಪ್ರಮಾಣಿತ pH ಮೌಲ್ಯಕ್ಕೆ ಅನುಗುಣವಾಗಿಲ್ಲ ಎಂದು ಮಹಾರಾಷ್ಟ್ರದ ಆಹಾರ ಮತ್ತು ಔಷಧಗಳ ಆಡಳಿತ ಈ ನಿರ್ಧಾರದ ಕಾರಣವನ್ನು ಬಹಿರಂಗಪಡಿಸಿದೆ. 

ಡ್ರಗ್ಸ್ ಅಂಡ್ ಅಡ್ಮಿನಿಸ್ಟ್ರೇಷನ್ ಆಕ್ಟ್, 1940 ರ ಅಡಿಯಲ್ಲಿ ಆಡಳಿತವು ಸಂಸ್ಥೆಗೆ ಶೋಕಾಸ್ ನೊಟೀಸ್ ನೀಡಿದೆ. ಪರವಾನಗಿಯನ್ನು ಅಮಾನತುಗೊಳಿಸುವುದು ಅಥವಾ ರದ್ದುಗೊಳಿಸುವಂತಹ ಕ್ರಮವನ್ನು ಏಕೆ ತೆಗೆದುಕೊಳ್ಳಬಾರದು ಎಂದು ಕೇಳಿದೆ. ಉತ್ಪನ್ನದ ಎಲ್ಲಾ ಸ್ಟಾಕ್ ಅನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದೆ. 

ಸುಮಾರು 38,000 ಸಾವಿರ ಗ್ರಾಹಕರು ಈ ಉತ್ಪನ್ನದ ಬಗ್ಗೆ ದೂರು ನೀಡಿದ್ದಾರೆ ಎಂಬುವುದು ಗಮನಿಸಬೇಕಾದ ವಿಚಾರ. ಈ ಪೌಡರ್​ನಲ್ಲಿ ಕಂಡುಬರುವ ಹಾನಿಕಾರಕ ಫೈಬರ್ ಆಸ್ಬೆಸ್ಟೋಸ್ ನಿಂದಾಗಿ ಜನರಲ್ಲಿ ಕ್ಯಾನ್ಸರ್ ಬರುವ ಅಪಾಯ ಹೆಚ್ಚುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.