ಚಂಡಮಾರುತ ಎಫೆಕ್ಟ್ : ಬೆಂಗಳೂರು ಸೇರಿ 6 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಚಂಡಮಾರುತ ಎಫೆಕ್ಟ್ : ಬೆಂಗಳೂರು ಸೇರಿ 6 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಬೆಂಗಳೂರು : ಶ್ರೀಲಂಕಾದ ಪೂರ್ವ ಕರಾವಳಿ ಮತ್ತು ಅದಕ್ಕೆ ಹೊಂದಿಕೊಂಡಿರುವ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿದ್ದು, ಈಗ ಸಮುದ್ರ ಮಟ್ಟದಿಂದ 1.5 ಕಿ.ಮೀ.ವರೆಗೆ ವಿಸ್ತರಿಸಿದೆ. ಇದರ ಪರಿಣಾಮದಿಂದ ಕೆಲ ಜಿಲ್ಲೆಗಳಲ್ಲಿ 2 ದಿನ ಮಳೆಯಾಗಲಿದೆ. 

 

ಹೌದು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

 

ಕೊಮೊರಿನ್ ಪ್ರದೇಶ ಮತ್ತು ನೆರೆಹೊರೆಗಳಲ್ಲಿ ಚಂಡಮಾರುತದ ಪರಿಚಲನೆಯು ಈಗ ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಸಮಭಾಜಕ ಹಿಂದೂ ಮಹಾಸಾಗರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ. ಎತ್ತರದಲ್ಲಿದೆ. ಇದರಿಂದ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. 

 

ಎಲ್ಲೆಲ್ಲಿ ಮಳೆ: ಹಾಸನ, ಚಾಮರಾಜನಗರ, ಕೊಡಗು, ಮೈಸೂರು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದ್ದು, ಇನ್ನು ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಂಜು ಬೀಳುವ ಸಾಧ್ಯತೆ ಇದೆ. ಜನವರಿ 20 ರವರೆಗೂ ಇದೇ ಹವಾಮಾನ ಮುಂದುವರಿಯಲಿದೆ. 

 

ಮುಂದಿನ 24 ಗಂಟೆಗಳ ಕಾಲ ಬೆಂಗಳೂರು ಹಾಗೂ ನೆರೆಯ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 20°C ಇರುವ ಸಾಧ್ಯತೆ ಇದೆ. 

ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸೋಮವಾರ ಹಗುರ ಮಳೆಯಾಗಿದೆ. ವಿಜಯಪುರದಲ್ಲಿ ಕನಿಷ್ಠ ತಾಪಮಾನ 14.6 ಡಿ.ಸೆ ಹಾಗೂ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಗರಿಷ್ಠ ತಾಪಮಾನ 32.8 ಡಿ.ಸೆ ದಾಖಲಾಗಿದೆ. ಇನ್ನು ಬೆಂಗಳೂರಿನಲ್ಲಿ ಇನ್ನೆರಡು ದಿನ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಮುಂದುವರಿಯುವ ಸಾಧ್ಯತೆ ಇದೆ.