ವಿವಿಧ ಅಧಿಕಾರಿಗಳೊಂದಿಗೆ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಗೃಹ ಸಚಿವ ಪರಮೇಶ್ವರ ಸಭೆ

ವಿವಿಧ ಅಧಿಕಾರಿಗಳೊಂದಿಗೆ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಗೃಹ ಸಚಿವ ಪರಮೇಶ್ವರ ಸಭೆ

ಬೆಂಗಳೂರು: ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲದ ಹಣ ವಸೂಲಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗುವುದು, ಕಿರುಕುಳ ನೀಡುವುದನ್ನು ನಿಷೇಧಿಸುವ "ಕರ್ನಾಟಕ ಮೈಕ್ರೋಫೈನಾನ್ಸ್ ಪ್ರಿವೆನ್ಷನ್ ಆಫ್ ಕೋಯೆರ್ಸಿವ್ ಆ್ಯಂಡ್ ಇನ್‌ಹ್ಯೂಮನ್ ಆ್ಯಕ್ಷನ್ 2025" ಮಸೂದೆ ಕುರಿತು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಕಂದಾಯ ಮತ್ತು ಆರ್ಥಿಕ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. 

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು, ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದನ್ನು ತಡೆಗಟ್ಟಲು ತ್ವರಿತವಾಗಿ ಕಾನೂನು ತರಬೇಕು ಎಂದು ಮುಖ್ಯಂಮತ್ರಿಯವರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ವಿಚಾರಗಳ ಕುರಿತು ಸುದೀರ್ಘವಾಗಿ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು‌. 

ಸಮಾಜದಲ್ಲಿ ಕೆಳಸ್ತರದ ಜನರು ಕಿರುಸಾಲ ತೆಗೆದುಕೊಳ್ಳುತ್ತಾರೆ. ಸಾಲ ವಸೂಲಿ ಮಾಡಲು ಅಮಾನವೀಯವಾಗಿ ವರ್ತಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಘಟನೆಗಳನ್ನು ನಿಲ್ಲಿಸಬೇಕಿದೆ. ಜನ ಊರು ಬಿಡುತ್ತಿರುವುದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿವೆ. ಹೀಗಾಗಿ ಮಸೂದೆ ತರಲು ಬಜೆಟ್ ಅಧಿವೇಶನದವರೆಗೂ ಕಾಯಲು ಆಗುವುದಿಲ್ಲ. ಸಭೆಯ ಪ್ರಮುಖ ಅಂಶಗಳನ್ನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಕ್ಯಾಬಿನೆಟ್ ಮುಂದೆ ತರಲಾಗುವುದು ಎಂದು ಅವರು ತಿಳಿಸಿದರು.