ಐಸಿಐಸಿಐ ಬ್ಯಾಂಕ್ ಕಟ್ಟಿ ಬೆಳೆಸಿದ ನಿರ್ಮಾತೃ : ನಾರಾಯಣನ್ ವಘುಲ್ ಇನ್ನು ನೆನಪು ಮಾತ್ರ

ಐಸಿಐಸಿಐ ಬ್ಯಾಂಕ್ ಕಟ್ಟಿ ಬೆಳೆಸಿದ ನಿರ್ಮಾತೃ : ನಾರಾಯಣನ್ ವಘುಲ್ ಇನ್ನು ನೆನಪು ಮಾತ್ರ

ಚೆನ್ನೈ : ಐಸಿಐಸಿಐ ಬ್ಯಾಂಕ್ ನಿರ್ಮಾತೃ ನಾರಾಯಣನ್ ವಘುಲ್ ತಮ್ಮ 88 ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ಇಂದು ನಿಧನರಾಗಿದ್ದಾರೆ. ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದ ಅವರ ಸ್ಥಿತಿ ಗಂಭೀರವಾಗಿತ್ತು. ಪ್ರಜ್ಞಾಹೀನರಾದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ವಘುಲ್, 44ನೇ ವಯಸ್ಸಿನಲ್ಲಿ ಸರ್ಕಾರಿ ಚಾಲಿತ ಬ್ಯಾಂಕ್ ಆಫ್ ಇಂಡಿಯಾದ ಕಿರಿಯ ಅಧ್ಯಕ್ಷರಾದರು. ರಾಜೀವ್ ಗಾಂಧಿ ಆಡಳಿತದ ಅವಧಿಯಲ್ಲಿ ಐಸಿಐಸಿಐ ಬ್ಯಾಂಕ್‌ನ ಮುಖ್ಯಸ್ಥರಾಗುವಂತೆ ಕೋರಲಾಯಿತು. 

ವಘುಲ್ 80 ರ ದಶಕದ ಮಧ್ಯಭಾಗದಲ್ಲಿ ಆಗಿನ ಇಂಡಸ್ಟ್ರಿಯಲ್ ಕ್ರೆಡಿಟ್ ಮತ್ತು ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಐಸಿಐಸಿಐ- ಈಗ ಐಸಿಐಸಿಐ ಬ್ಯಾಂಕ್) ಎಂಡಿ ಮತ್ತು ಸಿಒಒ ಆಗಿ ಅಧಿಕಾರ ವಹಿಸಿಕೊಂಡು, ಈ ಹಣಕಾಸು ಸಂಸ್ಥೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನಂತರ ಅವರ ಉಸ್ತುವಾರಿಯಲ್ಲಿಯೇ ಇದನ್ನು ಐಸಿಐಸಿಐ ಬ್ಯಾಂಕ್ ಆಗಿ ಪರಿವರ್ತಿಸಲಾಯಿತು. ವಘುಲ್ 2010ರಲ್ಲಿ ವ್ಯಾಪಾರ ಮತ್ತು ಕೈಗಾರಿಕೆ ವಿಭಾಗದಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದರು.