ಮಳೆ ನಡುವೆ ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಸಿಎಂ ಭೇಟಿ

ಕಾರವಾರ : ಭಾರಿ ಮಳೆ ಹಿನ್ನಲೆಯಲ್ಲಿ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಭೇಟಿ ನೀಡಿ ವೀಕ್ಷಿಸಿದರು. ಸಿಎಂ ಸಿದ್ದರಾಮಯ್ಯ ಜೊತೆ ಸಚಿವರಾದ ಕೃಷ್ಣ ಬೈರೇಗೌಡ, ಮಂಕಾಳ ವೈದ್ಯ, ಸತೀಶ್ ಜಾರಕಿಹೊಳಿ ಸಾಥ್ ನೀಡಿದರು.
ಸಿಎಂ ಭೇಟಿ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮತ್ತೆ ಗುಡ್ಡ ಕುಸಿಯುವ ಆತಂಕವಿದ್ದು, ಈ ನಡುವೆ ನಾಯಕರುಗಳು ಸ್ಥಳದ ವೀಕ್ಷಣೆ ನಡೆಸಿದರು. ಘಟನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ ಪರಿಹಾರ ಕಾರ್ಯಾಚರಣೆ ಬಗ್ಗೆ ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ ಸಿಬ್ಬಂದಿ ಜೊತೆ ಚರ್ಚೆ ನಡೆಸಿದರು. ಈ ವೇಳೆ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನ ಬಳಸಲು, ಉನ್ನತ ಮೆಟಲ್ ಡಿಟೆಕ್ಟರ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಲು ಸಿದ್ದರಾಮಯ್ಯ ಸೂಚನೆ ನೀಡಿದರು.
ಗುಡ್ಡ ಕುಸಿತದಲ್ಲಿ ಮಣ್ಣಿನಡಿ ಸಿಲುಕಿರುವ ಕೇರಳ ಲಾರಿ ಚಾಲಕ ಅರ್ಜುನ್ ರಕ್ಷಣಾ ಕಾರ್ಯಾಚರಣೆಗೆ ಮಿಲಿಟರಿ ಪಡೆ ಆಗಮಿಸಿದೆ. ಚಾಲಕನ ಕುಟುಂಬದ ಮನವಿ ಮೇರೆಗೆ ಪ್ರಧಾನಿ ಕಚೇರಿಯು, ರಕ್ಷಣಾ ಕಾರ್ಯಾಚರಣೆ ವಿಳಂಬದ ಬಗ್ಗೆ ಮಾಹಿತಿ ಪಡೆದಿತ್ತು. ಬಳಿಕ ಗೃಹ ಸಚಿವ ಅಮಿತ್ ಶಾ ಅವರು ಕಾರ್ಯಾಚರಣೆಗೆ ಮಿಲಿಟರಿ ಪಡೆಯನ್ನ ಕಳುಹಿಸಲು ಸೂಚನೆ ನೀಡಿದ್ದರು.
ಇದಕ್ಕೂ ಮುನ್ನ ಭೇಟಿ ನೀಡಿದ್ದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ''30 ವರ್ಷದ ರಾಜಕೀಯ ಬದುಕಿನಲ್ಲಿ ಇಂತಹದ್ದೊಂದು ದುರ್ಘಟನೆಯನ್ನು ನೋಡಿರಲಿಲ್ಲ. ಗುಡ್ಡ ಕುಸಿತ ದುರಂತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಯಾರ ಮೇಲೂ ಆರೋಪ ಮಾಡುವ ಕೆಲಸವನ್ನು ನಾನು ಮಾಡಲ್ಲ'' ಎಂದು ಹೇಳಿದರು. ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಆಶಿಸುತ್ತೇನೆ'' ಎಂದರು.