SBI ನೂತನ ಅಧ್ಯಕ್ಷರಾಗಿ ಚಲ್ಲಾ ಶ್ರೀನಿವಾಸುಲು ಶೆಟ್ಟಿ ನೇಮಕ

ನವದೆಹಲಿ : SBI ನ ಪ್ರಸ್ತುತ ಅಧ್ಯಕ್ಷ ದಿನೇಶ್ ಕುಮಾರ ಖಾರಾ ಅವರ ಅಧಿಕಾರ ಅವಧಿ ಇದೇ 28ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ತೆರವಾಗುವ ಅವರ ಸ್ಥಾನಕ್ಕೆ ತೆಲಂಗಾಣ ಮೂಲದ ಶ್ರೀನಿವಾಸುಲು ಶೆಟ್ಟಿ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಚಲ್ಲಾ ಶ್ರೀನಿವಾಸುಲು ಅವರು ಮೂರು ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಶ್ರೀನಿವಾಸುಲು ಶೆಟ್ಟಿ ಅವರ ನೇಮಕವನ್ನು ಹಣಕಾಸು ಸೇವೆಗಳ ಇಲಾಖೆ ಶಿಫಾರಸು ಮಾಡಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ. ನೇಮಕಾತಿ ಸಮಿತಿ ಎಸಿಸಿ ಈ ಶಿಫಾರಸನ್ನು ಒಪ್ಪಿಕೊಂಡಿದ್ದು, ಮುಂದಿನ ಅಧ್ಯಕ್ಷರ ಶಿಫಾರಸನ್ನು ಅನುಮೋದಿಸಿದೆ.
ಕೃಷಿಯಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಮಾಡಿರುವ ಶ್ರೀನಿವಾಸ್ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್‌ಗಳ ಪ್ರಮಾಣೀಕೃತ ಬ್ಯಾಂಕರ್ ಕೂಡಾ ಆಗಿದ್ದಾರೆ. 1988 ರಲ್ಲಿ ಎಸ್‌ಬಿಐನಲ್ಲಿ ಪ್ರೊಬೇಷನರಿ ಅಧಿಕಾರಿ ಪಿಒ ಆಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು.
ಇನ್ನು ಶ್ರೀನಿವಾಸ್ ಅವರು ಎಸ್ಬಿಐನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಹಿನ್ನೆಲೆಯಲ್ಲಿ ಬ್ಯಾಂಕ್ನ ನೂತನ MD ಆಗಿ ರಾಣಾ ಅಶುತೋಷ್ ಕುಮಾರ್ ಸಿಂಗ್ ಅವರನ್ನು ಸರ್ಕಾರ ನೇಮಿಸಿದೆ. ಅವರು ಜೂನ್ 30, 2027 ರವರೆಗೆ ಈ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಎಸ್‌ಬಿಐ ಒಬ್ಬ ಅಧ್ಯಕ್ಷರು ಮತ್ತು ನಾಲ್ಕು ಎಂಡಿಗಳನ್ನು ಹೊಂದಿದೆ. ಪ್ರಸ್ತುತ ಸಿಂಗ್ ಅವರು ಡೆಪ್ಯೂಟಿ ಎಂಡಿ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.