ಕೆಎಸ್‌ಆರ್‌ಟಿಸಿ ನಾಲ್ಕು ವಲಯಗಳಿಗೆ ಎಲೆಕ್ಟ್ರಿಕಲ್ ಬಸ್ ಖರೀದಿಗೆ ಕ್ಯಾಬಿನೆಟ್ ಒಪ್ಪಿಗೆ

ಕೆಎಸ್‌ಆರ್‌ಟಿಸಿ ನಾಲ್ಕು ವಲಯಗಳಿಗೆ ಎಲೆಕ್ಟ್ರಿಕಲ್ ಬಸ್ ಖರೀದಿಗೆ ಕ್ಯಾಬಿನೆಟ್ ಒಪ್ಪಿಗೆ

ಬೆಂಗಳೂರು: ಶಕ್ತಿ ಯೋಜನೆ ಜಾರಿಯ ಬಳಿಕ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ರಾಜ್ಯದಲ್ಲಿ ಬಸ್ ಗಳಿಲ್ಲದಿದ್ದುದನ್ನು ಗಮನಿಸಿದ ಸರ್ಕಾರ ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕೂ ವಿಭಾಗಗಳಿಗೆ ಅಗತ್ಯಕ್ಕೆ ತಕ್ಕಂತೆ ಹಾಗೂ ಹೆಚ್ಚುವರಿ ನೂತನ ಬಸ್ ಗಳ ಖರೀದಿಗೆ ನಿರ್ಧರಿಸಿದೆ. 

ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಗುರುವಾರ ಸಂಜೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಬಿಎಂಟಿಸಿಯಿಂದ 150 ಕೋಟಿ ರೂ.ಗಳ ವೆಚ್ಚದಲ್ಲಿ 320 ಎಲೆಕ್ಟ್ರಿಕಲ್ ಬಸ್ ಗಳ ಖರೀದಿಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು ತಿಳಿಸಿದರು. 

ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ಒದಗಿಸಿದ ಅವರು, ಕೆಎಸ್ ಆರ್ ಟಿಸಿ ವತಿಯಿಂದ 100 ಕೋಟಿ ವೆಚ್ಚದಲ್ಲಿ 250 ಬಸ್ ಗಳನ್ನು ಖರೀದಿಸಲು ಸರ್ಕಾರಕ್ಕೆ ಕ್ಯಾಬಿನೆಟ್ ನಲ್ಲಿ ಅನುಮತಿ ನೀಡಲಾಗಿದೆ ಎಂದರು. 

ಇನ್ನು, ಎನ್ ಡಬ್ಲ್ಯೂ ಕೆಆರ್ ಟಿಸಿ 150 ಕೋಟಿ ವೆಚ್ಚದಲ್ಲಿ 375 ನೂತನ ಬಸ್, ಕೆಕೆಆರ್ ಟಿಸಿಗೆ 100 ಕೋಟಿ ವೆಚ್ಚದಲ್ಲಿ 250 ಬಸ್ ಗಳ ಖರೀದಿಗೆ ಸಂಪುಟ ಸಭೆ ಒಪ್ಪಿಗೆ ಕೊಟ್ಟಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಅವರು ತಿಳಿಸಿದರು. ರಾಜ್ಯದಲ್ಲಿನ ಬರದ ಕುರಿತು ಮುಂದಿನ ವಾರ ಚರ್ಚಿಸಲಾಗುವುದು. ಇನ್ನು ಇಂದು ನಡೆದ ಕ್ಯಾಬಿನೆಟ್ ನಲ್ಲಿ ಒಟ್ಟು ಹದಿನೇಳು ವಿಷಯಗಳು ಚರ್ಚೆಗೆ ಬಂದಿವೆ ಎಂದೂ ಅವರು ಹೇಳಿದರು.