ಇನ್ಫೋಸಿಸ್ಗೆ 32 ಸಾವಿರ ಕೋಟಿ ಜಿಎಸ್ಟಿ ನೋಟೀಸ್ - ರಿಯಾಯಿತಿ ನೀಡಲ್ಲ ಎಂದ ಕೇಂದ್ರ ಸರ್ಕಾರ.!

ಇನ್ಫೋಸಿಸ್ಗೆ 32 ಸಾವಿರ ಕೋಟಿ ಜಿಎಸ್ಟಿ ನೋಟೀಸ್ - ರಿಯಾಯಿತಿ ನೀಡಲ್ಲ ಎಂದ ಕೇಂದ್ರ ಸರ್ಕಾರ.!

ಬೆಂಗಳೂರು: ಇನ್ಫೋಸಿಸ್‌ ಪಾವತಿಸಬೇಕಾದ 32,000 ಕೋಟಿ ರೂ. ಜಿಎಸ್‌ಟಿ ಬಾಕಿ ವಿಷಯದಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. 

ಸರಕು ಮತ್ತು ಸೇವಾ ತೆರಿಗೆ ನಿಯಮಗಳ ಪ್ರಕಾರವಾಗಿ ತೆರಿಗೆ ಕೇಳಲಾಗುತ್ತಿದೆ ಎಂದು ಸರ್ಕಾರದ ಮೂಲವೊಂದನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಕಳೆದ ವಾರ ಜಿಎಸ್ಟಿ ಪ್ರಾಧಿಕಾರದಿಂದ ಇನ್ಫೋಸಿಸ್ ವಿರುದ್ಧ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಹೋಗಿದೆ. 32,400 ಕೋಟಿ ರೂ ತೆರಿಗೆ ಕಟ್ಟಬೇಕಿದೆ ಎಂದು ತನಗೆ ಕಳೆದ ವಾರ ಜಿಎಸ್ಟಿ ಪ್ರಾಧಿಕಾರದಿಂದ ನೋಟೀಸ್ ಬಂದಿದ್ದಾಗಿ ಆಗಸ್ಟ್ 3ರಂದು ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ಇನ್ಫೋಸಿಸ್ ತಿಳಿಸಿತ್ತು. 

"ತೆರಿಗೆ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಇನ್ಫೋಸಿಸ್‌ ಕಂಪನಿಯು ಜಿಎಸ್‌ಟಿ ನೋಟಿಸ್‌ಗೆ ಉತ್ತರಿಸಲು 10 ದಿನ ಕಾಲಾವಕಾಶ ಕೋರಿದೆ," ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಅಧಿಕಾರಿಗಳು ಹೇಳಿದ್ದಾರೆ. 

2017ರ ಜುಲೈನಿಂದ ಹಿಡಿದು 2021-22ರ ಹಣಕಾಸು ವರ್ಷಾಂತ್ಯದವರೆಗೆ ಇನ್ಫೋಸಿಸ್ ಸಂಸ್ಥೆ ವಿದೇಶಗಳಲ್ಲಿರುವ ತನ್ನ ಕಚೇರಿಗಳಿಂದ ಪಡೆದ ಸೇವೆಗಳಿಗೆ ಜಿಎಸ್ಟಿ ಪಾವತಿಸಿಲ್ಲ ಎಂಬುದು ಈಗ ಸಲ್ಲಿಸಲಾಗಿರುವ ನೋಟೀಸ್ನಲ್ಲಿರುವ ಅಂಶ. 

ಇನ್ಫೋಸಿಸ್ ಸಂಸ್ಥೆ ತಾನು ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳುತ್ತಿದೆ. 4 ಬಿಲಿಯನ್ ಡಾಲರ್ ಅಥವಾ 32,400 ಕೋಟಿ ರೂ ಹಣ ಸಣ್ಣ ಮೊತ್ತವಲ್ಲ. ಇನ್ಫೋಸಿಸ್ಗೆ ಒಂದು ತ್ರೈಮಾಸಿಕ ಅವಧಿಯಲ್ಲಿ ಸಿಗುವ ಆದಾಯಕ್ಕೆ ಬಹುತೇಕ ಸಮ ಆಗುತ್ತದೆ. 

ಇನ್ಫೋಸಿಸ್ ವಿರುದ್ಧ ಬಂದಿರುವ 32,000 ಕೋಟಿ ರೂ ಜಿಎಸ್ಟಿ ನೋಟೀಸ್ ಕ್ರಮವನ್ನು ಕಾಂಗ್ರೆಸ್ ಪಕ್ಷ ಟೀಕಿಸಿದೆ. ನಾರಾಯಣಮೂರ್ತಿ ಅವರು ಭಾರತದ ಆರ್ಥಿಕ ಸ್ಥಿತಿ ಬಗ್ಗೆ ಕನ್ನಡಿ ಹಿಡಿದ ಕಾರಣಕ್ಕೆ ಸರ್ಕಾರ ಈ ದ್ವೇಷ ಸಾಧಿಸುತ್ತಿದೆ ಎಂದು ಮಹಾರಾಷ್ಟ್ರ ಘಟಕದ ಕಾಂಗ್ರೆಸ್ ಆರೋಪಿಸಿದೆ. 

ಭಾರತದಕ್ಕಿಂತ ಚೀನಾ 6 ಪಟ್ಟು ಹೆಚ್ಚು ಜಿಡಿಪಿ ಹೊಂದಿದೆ. ಹೀಗಿರುವಾಗ ಭಾರತ ಉತ್ಪಾದನಾ ಅಡ್ಡೆಯಾಗಬಲ್ಲುದು ಎಂದು ನಂಬುವುದು ಕಷ್ಟ ಎಂದು ಇನ್ಫೋಸಿಸ್ನ ಸಹ-ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ್ದರು. ಅದರ ಬೆನ್ನಲ್ಲೇ ಮೋದಿ ಸರ್ಕಾರದ ಸೂಚನೆ ಮೇರೆಗೆ ಜಿಎಸ್ಟಿ ಇಂಟೆಲಿಜೆನ್ಸ್ನ ಮಹಾನಿರ್ದೇಶನಾಲಯದಿಂದ ಇನ್ಫೋಸಿಸ್ಗೆ ಜಿಎಸ್ಟಿ ನೋಟೀಸ್ ಸಲ್ಲಿಕೆ ಆಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಗೋಪಾಲ್ ತಿವಾರಿ ಹೇಳಿದ್ದಾರೆ.