ಯೋಧರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಅಪಘಾತ- ತಪ್ಪಿದ ಅನಾಹುತ

ಚೆನ್ನೈ: ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಯೋಧರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಯೋಧರ ಮೃತದೇಹಗಳನ್ನು ಮದ್ರಾಸ್ ರೆಜಿಮೆಂಟಲ್ ಸೆಂಟರ್ (ಎಂಆರ್‌ಸಿ) ಕುನ್ನೂರಿನ ವೆಲ್ಲಿಂಗ್‌ಟನ್‌ನಿಂದ ಸುಲೂರ್ ಏರ್ ಬೇಸ್‌ಗೆ ಕೊಂಡೊಯ್ಯಲಾಗುತ್ತಿತ್ತು. ಆದರೆ ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್ ಮಾರ್ಗಮಧ್ಯೆ ಅಪಘಾತವಾಗಿದೆ. ಈ ದುರಂತದಲ್ಲಿ ಪೊಲೀಸರ ಇಲಾಖೆಯ ಕೆಲ ಸಿಬ್ಬಂದಿಗೆ ಗಾಯವಾಗಿದೆ. ಸೂಲೂರು ವಾಯುನೆಲೆಯಿಂದ ಸುಮಾರು 45 ಕಿ.ಮೀ ದೂರದಲ್ಲಿ ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಮತ್ತೊಂದು ಆಂಬ್ಯುಲೆನ್ಸ್‌ಗೆ ವರ್ಗಾಯಿಸಿ, ಸೂಲೂರ್ ಏರ್ ಬೇಸ್‌ಗೆ ಕೊಂಡೊಯ್ಯಲಾಯಿತು. ಅಲ್ಲಿಂದ ಯೋಧರ ಪಾರ್ಥಿವ ಶರೀರಗಳನ್ನು ಐಎಎಫ್ ವಿಮಾನದ ಮೂಲಕ ದೆಹಲಿಗೆ ಸಾಗಿಸಲಾಗುತ್ತದೆ.