ಸಂಗೀತ ಮಾಂತ್ರಿಕ ಸಂತೂರ್ ವಾದಕ ಶಿವಕುಮಾರ್ ಶರ್ಮಾ ಇನ್ನಿಲ್ಲ

ಪದ್ಮವಿಭೂಷಣ ಪಂಡಿತ್ ಶಿವಕುಮಾರ್ ಶರ್ಮಾ (84) ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ. ದೇಶದ ಸಾಂಸ್ಕೃತಿಕ ಲೋಕಕ್ಕೆ ಖ್ಯಾತ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರ ಕೊಡುಗೆ ಅಪಾರ.
ಇನ್ನು ಶಿವಕುಮಾರ ಅವರು ಕಳೆದ 6 ತಿಂಗಳುಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ (ಮೇ 10) ಮುಂಬೈನಲ್ಲಿರುವ ನಿವಾಸದಲ್ಲಿ ಹೃದಯಸ್ತಂಭನದಿಂದ ನಿಧನರಾದರು ಎಂದು ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.
ಶಾಸ್ತ್ರೀಯ ಸಂಗೀತ ಮಾತ್ರವಲ್ಲದೇ ಚಲನಚಿತ್ರ ಸಂಗೀತದಲ್ಲೂ ಶಿವಕುಮಾರ್ ಶರ್ಮಾ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿದ್ದರು. ಬಾಲಿವುಡ್‌ನಲ್ಲಿ ಚಾಂದಿನಿ, ಸಿಲ್‌ಸಿಲಾ, ಡರ್ ಸೇರಿದಂತೆ ಹಲವಾರು ಸಿನಿಮಾಗಳಿಗೆ ಸಂಗೀತ ನೀಡಿದ್ದರು.
ಶಿವಕುಮಾರ್ ಶರ್ಮಾ ಅವರು 1938ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸಿದರು. 1950ರಲ್ಲಿ ತಂದೆಯ ಬಳಿ ಸಂತೂರ್ ಶಿಕ್ಷಣ ಆರಂಭಿಸಿದರು. ನಂತರ ಸಂಗೀತ ನಿರ್ದೇಶಕರು ಸೇರಿಂದತೆ ವಿವಿಧ ಸಂಗೀತಗಾರರ ಬಳಿ ಕೆಲಸ ಮಾಡಿ ಸಂತೂರ್ ವಾದನದಲ್ಲಿ ಪ್ರಾವೀಣ್ಯತೆ ಪಡೆದರು.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು ಸಹ ಪ್ರತಿಕ್ರಿಯಿಸಿದ್ದು, ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಪಂಡಿತ್ ಶಿವಕುಮಾರ್ ಶರ್ಮಾ ಅವರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೆ ತುಂಬಲಾಗ ನಷ್ಟ. ಅವರ ಸಾವಿನ ನೋವು ಬರಿಸುವ ಶಕ್ತಿಯನ್ನು ಕುಟುಂಬಕ್ಕೆ ಮತ್ತು ಕಲಾರಂಗಕ್ಕೆ ಕಲ್ಪಿಸಲಿ ಎಂದು ಪ್ರಧಾನಿ ಪ್ರಾರ್ಥಿಸಿದ್ದಾರೆ.