ಉಕ್ರೇನ್ ನಲ್ಲಿ ಯುದ್ಧಾತಂಕ : 242 ಭಾರತೀಯರನ್ನು ಕರೆತಂದ ಏರ್ ಇಂಡಿಯಾ

ಉಕ್ರೇನ್ ನಲ್ಲಿ ಯುದ್ಧಾತಂಕ : 242 ಭಾರತೀಯರನ್ನು ಕರೆತಂದ ಏರ್ ಇಂಡಿಯಾ

ದೆಹಲಿ : ಉಕ್ರೇನ್-ರಷ್ಯಾ ನಡುವಿನ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಪ್ರಜೆಗಳ ರಕ್ಷಣೆಗೆ ಮುಂದಾದ ಭಾರತ ಉಕ್ರೇನ್ ನಲ್ಲಿರುವ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರುತ್ತಿದೆ. ಫೆ. 22 ರಂದು ಉಕ್ರೇನ್ ನಿಂದ 242 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ರಾತ್ರಿ ವೇಳೆಗೆ ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತಲುಪಿರುವ ಬಗ್ಗೆ ಏರ್ ಇಂಡಿಯಾ ಪ್ರಕಟಣೆ ಹೊರಡಿಸಿದೆ. ಉಕ್ರೇನ್ ನಲ್ಲಿರುವ ಭಾರತೀಯರನ್ನು ವಾಪಸ್ ಕರೆತರಲು ಮಂಗಳವಾರ ಮುಂಜಾನೆ 7.30ಕ್ಕೆ, ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನ ಹೊರಟಿತ್ತು. ಸುಮಾರು 242 ಪ್ರಯಾಣಿಕರನ್ನು ಒಳಗೊಂಡ ಈ ವಿಮಾನ ಕೈವ್ ನಿಂದ ಸಂಜೆ 5.40ಕ್ಕೆ ಟೇಕ್ ಆಫ್ ಆಯಿತು. ರಾತ್ರಿ 10.15ರ ಹೊತ್ತಿಗೆ ದೆಹಲಿ ತಲುಪಿದೆ ಎಂದು ಮಾಹಿತಿ ನೀಡಿದೆ. ಸದ್ಯ ಒಂದು ವಿಮಾನ ಭಾರತೀಯರನ್ನು ಕರೆತಂದಿದ್ದು, ಇನ್ನೊಂದು ಫ್ಲೈಟ್ ಗುರುವಾರ ಹಾಗೂ ಮತ್ತೊಂದು ವಿಮಾನ ಶನಿವಾರ ಉಕ್ರೇನ್ ನಿಂದ ಭಾರತೀಯರನ್ನು ಕರೆ ತರಲಿದೆ. ಏರ್ ಇಂಡಿಯಾ ಈ ಹಿಂದೆ ಉಕ್ರೇನ್ ಗೆ ಯಾವುದೇ ವಾಣಿಜ್ಯ ವಿಮಾನ ಕಾರ್ಯಾಚರಣೆ ನಡೆಸಿರಲಿಲ್ಲ. ಇದೀಗ ಏರ್ ಇಂಡಿಯಾ ವಿಮಾನ ಸಂಚಾರ ಪ್ರಾರಂಭ ಮಾಡಿದ ಬೆನ್ನಲ್ಲೇ, ಭಾರತದ ಇತರ ವಿಮಾನ ಆಪರೇಟರ್ ಗಳೂ ಕೂಡ ಆಸಕ್ತಿ ತೋರಿಸುತ್ತಿದ್ದಾರೆ.