ಆಗಸ್ಟ್ 15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಸುವಂತಿಲ್ಲ - ಸಚಿವ ರಾಮಲಿಂಗಾರೆಡ್ಡಿ

ಆಗಸ್ಟ್ 15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಸುವಂತಿಲ್ಲ - ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಆಗಸ್ಟ್ 15ರಿಂದ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಸುವಂತಿಲ್ಲ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಆಗಸ್ಟ್ 15 ರ ಬಳಿಕ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವ ಹಾಗಿಲ್ಲ ಎಂದು ತಿಳಿಸಿದರು‌. 

15,000 ಎಕರೆ ದೇವಸ್ಥಾನಗಳ ಆಸ್ತಿ ಇಂಡೀಕರಣ ಆಗಿದೆ. ಇನ್ನೂ 20,000 ಎಕರೆ ದೇವಸ್ತಾನಗಳ ಖಾತೆ ಮಾಡಬೇಕಾಗಿದೆ, ಸೆಕ್ಷನ್ 31/7ರಂತೆ ಮೂರು ತಿಂಗಳ ಒಳಗೆ ದೇವಾಲಯ ಆಸ್ತಿಯ ಬಗ್ಗೆ ಅಧಿಸೂಚನೆ ಹೊರಡಿಸಲು ಸೂಚಿಸಲಾಗಿದೆ. 3,470 ದಾಖಲೆ ಸೃಷ್ಟಿ ಮಾಡಲಾಗಿದೆ. 40,000 ದೇವಾಲಯ ಆಸ್ತಿಗಳ ಬಗ್ಗೆ ಅಧಿಸೂಚನೆ ಹೊರಡಿಸುತ್ತೇವೆ. ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಕೃಷಿ ಭೂಮಿ ಹಾಗೂ ಗ್ರಾಮ ಠಾಣೆ ಪ್ರತ್ಯೇಕವಾಗಿ ಸರ್ವೆ ಮಾಡಲು ಸೂಚಿಸಲಾಗಿದೆ ಎಂದರು. ಒಟ್ಟು 4,000 ದೇವಾಲಯದ ಬಗ್ಗೆ ಮಾಹಿತಿ ಇದ್ದಿಲ್ಲ. ಈಗ ಸುಮಾರು 1,000 ಟೆಂಪಲ್ ಗಳ ಬಗ್ಗೆ ಗುರುತಿಸಲಾಗಿದೆ ಎಂದು ತಿಳಿಸಿದರು. 

ಇನ್ನು ಡಿಬಿಟಿ ಮೂಲಕ ಅರ್ಚಕರಿಗೆ ತಸ್ತೀಕ್ ನೀಡಲು ಕ್ರಮ ಕೈಗೊಳ್ಳಲಾಗಿದೆ, 14,000 ಅರ್ಚಕರು ಡಿಬಿಟಿಯಲ್ಲಿ ನೋಂದಣಿ ಮಾಡಲಾಗಿದೆ ಎಂದರು. 

ಇನ್ನೂ ಸೆಪ್ಟೆಂಬರ್ ಕೊನೆ ವಾರಕ್ಕೆ ತಿರುಪತಿಯಲ್ಲಿ 400 ಕೊಠಡಿ ಲಭ್ಯವಾಗಲಿದೆ.ಮುಜರಾಯಿ ಇಲಾಖೆ ವ್ಯಾಪ್ತಿಯಡಿ ಒಟ್ಟು 3,000 ಕೊಠಡಿಗಳಿದ್ದು, ಅದನ್ನು ಎನ್ ಐಸಿಯಿಂದ ಆನ್ ಲೈನ್ ಮೂಲಕ ಬುಕ್ ಮಾಡುವ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು. 

ಚಾಮುಂಡೇಶ್ವರಿ ಬೆಟ್ಟದಲ್ಲಿ ಸುಮಾರು 11 ಎಕರೆ ಭೂಮಿ ಒತ್ತುವರಿ ಕ್ಲಿಯರ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.