ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಹೊಸ ದಾಖಲೆ - ಮತದಾನದಲ್ಲಿ ವಿಶ್ವದಾಖಲೆ ನಿರ್ಮಾಣ ಮಾಡಿದ ಭಾರತ

ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಹೊಸ ದಾಖಲೆ - ಮತದಾನದಲ್ಲಿ ವಿಶ್ವದಾಖಲೆ ನಿರ್ಮಾಣ ಮಾಡಿದ ಭಾರತ

ನವದೆಹಲಿ: ವಿಶ್ವದ ಅತಿದೊಡ್ಡ ಸಾರ್ವತ್ರಿಕ ಚುನಾವಣೆ ಈ ಬಾರಿ ಭಾರತದಲ್ಲಿ ನಡೆದಿದೆ. 2024ರ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದ್ದು, ನಾಳೆ ಇಡೀ ವಿಶ್ವವೇ ಕಾಯುತ್ತಿರುವ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದೆ. 

ಮತದಾನ ಮುಗಿದ ಬಳಿಕ ಕೇಂದ್ರ ಚುನಾವಣಾ ಆಯೋಗ ಮಹತ್ವದ ಸುದ್ದಿಗೋಷ್ಟಿ ನಡೆಸಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಈ ಬಾರಿ ನಡೆದ ಲೋಕಸಭಾ ಚುನಾವಣೆಯ ಸಾರ್ವಕಾಲಿಕ ದಾಖಲೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. 

ಮತದಾನದಲ್ಲಿ ಭಾರತ ವಿಶ್ವದಾಖಲೆ ನಿರ್ಮಾಣ ಮಾಡಿದ್ದು, ದೇಶದಲ್ಲಿ ಒಟ್ಟು 64.2 ಕೋಟಿ ಮತದಾರರು ಮತ ಚಲಾಯಿಸಿದ್ದಾರೆ. ವಿಶ್ವದ ಯಾವುದೇ ದೇಶದಲ್ಲೂ ಇಷ್ಟೊಂದು ಮತದಾನ ಆಗಿಲ್ಲ. G20 ದೇಶಗಳ ಒಂದೂವರೆ ಪಟ್ಟು ಮತದಾನ ಆಗಿದೆ. ಇನ್ನು, 31 ಕೋಟಿಗೂ ಹೆಚ್ಚಿನ ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದು, ವಿಶ್ವದಲ್ಲೇ ಭಾರತದಲ್ಲಿ ಹೆಚ್ಚಿನ ಮಹಿಳೆಯರು ಮತ ಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ. 

ಐತಿಹಾಸಿಕ ಚುನಾವಣೆಯನ್ನು ನಡೆಸಿದ್ದಕ್ಕೆ ನಮಗೆ ಖುಷಿ ಇದೆ. ಚುನಾವಣಾ ಸಿಬ್ಬಂದಿಯನ್ನು ನಾವು ಶ್ಲಾಘಿಸುತ್ತೇವೆ. ಚುನಾವಣೆಗಾಗಿ 135 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಜಮ್ಮು ಕಾಶ್ಮೀರದಲ್ಲಿ ಶೇ. 58.58ರಷ್ಟು ಮತ ಚಲಾವಣೆಯಾಗಿದೆ. ನಾವು ಕಾಶ್ಮೀರದ ವಲಸಿಗರ ಮನಸ್ಥಿತಿಯನ್ನು ಬದಲಾಯಿಸಿದ್ದೇವೆ ಇದು ದೇಶದ ನಿಜವಾದ ಸಕ್ಸಸ್ ಸ್ಟೋರಿ ಎಂದು ಸಿಇಸಿ ರಾಜೀವ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದರು. 

ಗ್ರೇಟ್ ನಿಕೋಬಾರ್‌ನಲ್ಲಿ ಮೊದಲ ಬಾರಿಗೆ ಶೋಂಪೇನ್ ಬುಡಕಟ್ಟು ಸಮುದಾಯ ಮತ ಚಲಾಯಿಸಿದೆ. ಛತ್ತೀಸ್‌ಗಢ ರಾಜ್ಯದ ಸರಗುಜಾ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯ ಮೊದಲ ಬಾರಿಗೆ ಮತದಾನ ಮಾಡಿದೆ. 23 ವಿದೇಶಗಳ ನಿಯೋಗಗಳು ಭಾರತಕ್ಕೆ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆ ಅಧ್ಯಯನ ಮಾಡಿವೆ. ಚುನಾವಣೆಯಲ್ಲಿ ಬರೋಬ್ಬರಿ 10 ಸಾವಿರ ಕೋಟಿ ಫ್ರೀಬಿ, ಮದ್ಯ, ನಗದು, ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. 1,054 ಕೋಟಿ ರೂ ನಗದು, 898 ಕೋಟಿ ರೂ ಲಿಕ್ಕರ್, 1,459 ಕೋಟಿ ಚಿನ್ನಾಭರಣ , 2198 ಕೋಟಿ ರೂಪಾಯಿ ಫ್ರೀಬಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.