BPL ಕಾರ್ಡ್‌ನಿಂದ 4 ಸಾವಿರ ಸರ್ಕಾರಿ ನೌಕರರು ಔಟ್ - ಒಬ್ಬನೇ ಒಬ್ಬ ಅರ್ಹ ಫಲಾನುಭವಿಯನ್ನು ಕೈಬಿಡುವಂತಿಲ್ಲ - ಸಿಎಂ ಸೂಚನೆ

BPL ಕಾರ್ಡ್‌ನಿಂದ 4 ಸಾವಿರ ಸರ್ಕಾರಿ ನೌಕರರು ಔಟ್ - ಒಬ್ಬನೇ ಒಬ್ಬ ಅರ್ಹ ಫಲಾನುಭವಿಯನ್ನು ಕೈಬಿಡುವಂತಿಲ್ಲ - ಸಿಎಂ ಸೂಚನೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ನಡೆಯಿತು. ಈ ವೇಳೆ ಆಹಾರ ಇಲಾಖೆಯು, BPL ಕಾರ್ಡ್‌ನಿಂದ 4 ಸಾವಿರ ಸರ್ಕಾರಿ ನೌಕರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಸಿಎಂಗೆ ಮಾಹಿತಿ ನೀಡಿದೆ. 

ಸಭೆಯಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸದ, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅನರ್ಹರನ್ನು ಗುರುತಿಸಿ ಹಂತ ಹಂತವಾಗಿ ತೆಗೆದು ಹಾಕಬೇಕು. ಆದರೆ ಒಬ್ಬನೇ ಒಬ್ಬ ಅರ್ಹ ಬಿಪಿಎಲ್ ಕಾರ್ಡ್‌ದಾರನ ಬಿಪಿಎಲ್ ಕಾರ್ಡ್‌ ರದ್ದು ಮಾಡಬಾರದು. ಅನರ್ಹ ಬಿಪಿಎಲ್ ಪಡಿತರ ಚೀಟಿದಾರರು ಸ್ವಯಂ ತಮ್ಮ ಬಿಪಿಎಲ್ ಕಾರ್ಡ್‌ಗಳನ್ನು ಹಿಂತಿರುಗಿಸಲು ಕಾಲಾವಕಾಶ ನೀಡಬೇಕು. ಆ ಬಳಿಕ ಅಂತವರಿಗೆ ನೋಟೀಸ್ ನೀಡಿ ಕಾರ್ಡ್‌ಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. 

ಪೆಟ್ರೋಲ್‌ ಬಂಕ್‌ಗಳ ತಪಾಸಣೆಯನ್ನು ಹೆಚ್ಚಿಸಿ ಅಳತೆ ಮತ್ತು ಗುಣಮಟ್ಟದಲ್ಲಿ ಮೋಸದಂತಹ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು.ಹಾಗೂ ಕನಿಷ್ಠ ಬೆಂಬಲ ಬೆಲೆ ಅಡಿ ಆಹಾರ ಧಾನ್ಯ ಸಂಗ್ರಹಿಸಲು ಎಲ್ಲಾ ವ್ಯವಸ್ಥೆ ಮಾಡಬೇಕು. ರೈತರಿಗೆ ಸಮಸ್ಯೆಯಾಗದಂತೆ ತ್ವರಿತವಾಗಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಕುಟುಂಬದಲ್ಲಿ ಒಬ್ಬರೇ ಇರುವ, 80 ವರ್ಷ ದಾಟಿದವರಿಗೆ ಮನೆ ಬಾಗಿಲಿಗೆ ಆಹಾರ ಧಾನ್ಯ ಒದಗಿಸುವ ಅನ್ನ-ಸುವಿಧಾ ಯೋಜನೆಯನ್ನು ಚನ್ನಾಗಿ ನಿರ್ವಹಣೆ ಮಾಡಬೇಕು ಎಂದು ಸಭೆಯಲ್ಲಿ ಸಿಎಂ ಸೂಚನೆ ನೀಡಿದರು.