ಸಂಸದ ಅಸಾದುದ್ದೀನ್ ಓವೈಸಿಗೆ 'Z' ಶ್ರೇಣಿ ಭದ್ರತೆ

ಸಂಸದ ಅಸಾದುದ್ದೀನ್ ಓವೈಸಿಗೆ 'Z' ಶ್ರೇಣಿ ಭದ್ರತೆ

ಹೈದರಾಬಾದ್: ಸಂಸದ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ನಿನ್ನೆ ಗುರುವಾರ ಗುಂಡಿನ ದಾಳಿಯಾಗಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಓವೈಸಿ ಅವರಿಗೆ ಕೇಂದ್ರ ಸರ್ಕಾರ ಝಡ್ (Z) ಶ್ರೇಣಿಯ ಭದ್ರತೆ ಒದಗಿಸಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ವಾಪಸಾಗುತ್ತಿದ್ದ ಎಐಎಂಐಎಂ ಅಸಾದುದ್ದೀನ್ ಓವೈಸಿ ಅವರ ಕಾರಿನ ಮೇಲೆ ಗುಂಡಿನ ದಾಳಿಯಾಗಿತ್ತು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಓವೈಸಿಗೆ Z ಕೆಟಗರಿ ಭದ್ರತೆಯನ್ನು ಒದಗಿಸಲಿದೆ. ಮೀರತ್‌ನ ಕಿತೌಧ್ ಪ್ರದೇಶದಲ್ಲಿ ಅವರ ಬೆಂಗಾವಲು ಪಡೆಯ ಮೇಲೆ ಗುಂಡು ಹಾರಿಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಲ್ಲಿ ಸಚಿನ್ ಎಂಬಾತ ನೋಯ್ಡಾ ನಿವಾಸಿಯಾಗಿದ್ದು, ಈತನ ವಿರುದ್ಧ ಈ ಹಿಂದೆ ಕೊಲೆ ಯತ್ನ ಪ್ರಕರಣವಿದೆ. ತಾನು ಕಾನೂನು ಪದವಿ ಪಡೆದಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದು, ಪೊಲೀಸರು ಆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ತನ್ನ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ, ಸಚಿನ್ ತಾನು ಹಿಂದೂ ಬಲಪಂಥೀಯ ಸಂಘಟನೆಯ ಸದಸ್ಯ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿ ಸಹಾರನ್‌ಪುರದ ರೈತ ಶುಭಂ ಎಂಬುವವರಾಗಿದ್ದು, ಯಾವುದೇ ಅಪರಾಧದ ದಾಖಲೆ ಹೊಂದಿಲ್ಲ.