ವಿಜಯನಗರ ಜಿಲ್ಲೆ ಅದ್ಧೂರಿ ಉದ್ಘಾಟನೆ: 337 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ವಿಜಯನಗರ ಜಿಲ್ಲೆ ಅದ್ಧೂರಿ ಉದ್ಘಾಟನೆ: 337 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ಹೊಸಪೇಟೆ: ಹೊಸಪೇಟೆ ಜನರ ಬಹುದಿನದ ಕನಸು ನನಸಾಗಿದೆ. ರಾಜ್ಯದ 31 ಜಿಲ್ಲೆಯಾಗಿ 'ವಿಜಯನಗರ' ಶನಿವಾರ ಸಂಜೆಯಿಂದ ಅಸ್ತಿತ್ವಕ್ಕೆ ಬಂದಿದೆ. ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಧಿಕೃತವಾಗಿ ಅದ್ಧೂರಿಯಾಗಿ ವಿಜಯನಗರ ಜಿಲ್ಲೆಯನ್ನು ವಿಜಯಸ್ಥಂಭ ಅನಾವಣರಗೊಳಿಸುವ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದರು. ಇದೇ ವೇಳೆ ಅವರು ಜಿಲ್ಲೆಯ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಜಯನಗರ ಜಿಲ್ಲೆಯಲ್ಲಿ ಸಂಸ್ಕೃತಿ, ಪುರಾತನತೆಯನ್ನು ಬಿಂಬಿಸುವ ಇತಿಹಾಸವಿದೆ. ಹಂಪಿಗೆ ಯಾತ್ರಿಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬರಬೇಕು‌. 643 ಕೋಟಿಯಲ್ಲಿ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ವಿಶಾಲವಾದ ಜಿಲ್ಲಾಡಳಿತ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಜಿಲ್ಲಾ ಕೇಂದ್ರಕ್ಕೆ ಎಲ್ಲ ರೀತಿಯ ಹಣಕಾಸಿನ ನೆರವನ್ನು ಸರಕಾರ ಮಾಡಲಿದೆ. ಸಮಯಕ್ಕನುಸಾರವಾಗಿ ಎಲ್ಲ ಅನುದಾನ ಬಿಡುಗಡೆ ಮಾಡಲಾಗುವುದು. ವಿಜಯನಗರ ಜಿಲ್ಲೆ ಸ್ಥಾಪನೆ ದಿನ ಅಭಿವೃದ್ಧಿ ಪರ್ವ ಆರಂಭವಾಗಿದೆ‌ ಎಂದು ಹೇಳಿದರು. ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಶ್ರೀರಾಮುಲು, ಗೋವಿಂದ ಕಾರಜೋಳ, ಆನಂದ್ ಸಿಂಗ್, ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.