ಗದಗ: ತೋಂಟದ ಸಿದ್ಧಲಿಂಗ ಸ್ವಾಮೀಜಿಗಳ ಜನ್ಮದಿನವನ್ನು ಭಾವೈಕ್ಯ ದಿನವಾಗಿ ಆಚರಣೆ

ಗದಗ: ಜಗದ್ಗುರು ಡಾ: ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಗಳ ಜನ್ಮದಿನವನ್ನು ಭಾವೈಕ್ಯ ದಿನವನ್ನಾಗಿ ಆಚರಿಸಲಾಗುವುದು. ಈ ಕುರಿತು ಸರ್ಕಾರಿ ಆದೇಶವನ್ನು ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ, ಗದಗ ವತಿಯಿಂದ ಆಯೋಜಿಸಿದ್ದ ತ್ರಿವಿಧ ದಾಸೋಹಮೂರ್ತಿ ಪೂಜ್ಯ ಲಿಂಗೈಕ್ಯ ಶ್ರೀ ಜಗದ್ಗುರು ಡಾ: ತೋಂಟದ ಸಿದ್ಧಲಿಂಗಮಹಾಸ್ವಾಮೀಜಿಗಳ ಐಕ್ಯ ಮಂಟಪ ಲೋಕಾರ್ಪಣೆ ಮಾಡಿ ಮಾತನಾಡಿದರು. ಅವರ ಜನ್ಮ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯ.ಪರಮಪೂಜ್ಯರು ಜ್ಞಾನಿಗಳಾಗಿದ್ದರು. ಆಧ್ಯಾತ್ಮಿಕವಾಗಿ ಅವರ ಜ್ಞಾನ ಆಳವಾಗಿತ್ತು. ಆ ಆಳದ ಲೆಕ್ಕ ನಮಗ್ಯಾರಿಗೂ ಸಿಕ್ಕಿಲ್ಲ. ಅವರ ಲೌಕಿಕ ಜ್ಞಾನವೂ ಅಷ್ಟೇ ವಿಸ್ತಾರವಾಗಿತ್ತು. ಭಕ್ತರಿಗೆ ಜ್ಞಾನದ ಮೂಲಕ ಮಾರ್ಗದರ್ಶನ ಮಾಡಿದಾಗ ಅವರು ಸಂತೃಪ್ತರಾಗಿ ಬದುಕಿನ ಮಾರ್ಗವನ್ನು ಪಡೆದುಕೊಂಡು ಯಶಸ್ವಿಯಾಗಿದ್ದಾರೆ. ಪರಮಪೂಜ್ಯರ ಸಂಘಕ್ಕೆ ಬಂದವರು ಅಪಾರವಾದ ಪ್ರೀತಿ, ಆತ್ಮೀಯತೆ, ಆಶೀರ್ವಾದ ನೀಡಿದ್ದಾರೆ ಎಂದರು.