ಇಂದೇ ಪ್ರಕಟವಾಗಬೇಕಿದ್ದ 5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶಕ್ಕೂ ಮೊದಲೇ ‘ಸುಪ್ರೀಂ’ ತಡೆ

ಇಂದೇ ಪ್ರಕಟವಾಗಬೇಕಿದ್ದ 5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶಕ್ಕೂ ಮೊದಲೇ ‘ಸುಪ್ರೀಂ’ ತಡೆ

ನವದೆಹಲಿ: ರಾಜ್ಯದ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶವನ್ನು ಆಯಾ ಶಾಲೆಗಳಲ್ಲಿ ಸೋಮವಾರ ಪ್ರಕಟಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೂಚಿಸಿತ್ತು. ಆದರೆ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಡೆ ನೀಡಿದೆ. 

5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮಾರ್ಚ್ 22ರಂದು ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ಎತ್ತಿಹಿಡಿದಿತ್ತು. 

ಸದ್ಯ ಯಾವುದೇ ಶಾಲೆಗಳು ಸಹ ಫಲಿತಾಂಶ ಪ್ರಕಟಿಸಬಾರದು. ಮುಂದಿನ ಆದೇಶದ ವರೆಗೆ ಕಾಯಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮಾರ್ಚ್ನಲ್ಲಿ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿ ಆದೇಶ ನೀಡಿದ್ದ ಹೈಕೋರ್ಟ್, ಸ್ಥಗಿತಗೊಂಡಿರುವ ಪರೀಕ್ಷೆ ಮುಂದುವರಿಸಲು ಸೂಚನೆ ನೀಡಿತ್ತು. ಅದರಂತೆ ಬಳಿಕ ಶಾಲೆಗಳು ಪರೀಕ್ಷೆಗಳನ್ನು ನಡೆಸಿದ್ದವು. ಇದೀಗ ಫಲಿತಾಂಶ ಪ್ರಕಟವಾಗುವ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಬಂದಿದೆ. 

2023-24ನೇ ಸಾಲಿನಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ 5, 8, 9ನೇ ಹಾಗೂ 11 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. 

ರಾಜ್ಯ ಪಠ್ಯಕ್ರಮದ ಶಾಲೆಗಳ 5, 8, 9ನೇ ತರಗತಿ ಮಕ್ಕಳ ಬೋರ್ಡ್‌ ಪರೀಕ್ಷೆಯ ಮೌಲ್ಯಮಾಪನ ಕಾರ್ಯದಲ್ಲಿ ಅನೇಕ ಲೋಪದೋಷಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ರುಪ್ಸಾ ಇದನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಲೇರಿತ್ತು. ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ತನ್ನ ದೂರಿನಲ್ಲಿ ಮೌಲ್ಯಾಂಕನದ ಫಲಿತಾಂಶವನ್ನು ಆಯಾ ಶಾಲೆಗಳಿಗೆ ಕಳುಹಿಸಿದ್ದು ಇದರಲ್ಲಿ ಅನೇಕ ಲೋಪದೋಷಗಳು ಕಂಡುಬಂದಿವೆ. 

ವಿದ್ಯಾರ್ಥಿಗಳು ಸರಿಯಾದ ಉತ್ತರ ಬರೆದಿದ್ದರೂ ಸೂಕ್ತ ಅಂಕ ನೀಡಿಲ್ಲ ಎಂಬುದು ತಿಳಿದುಬಂದಿದೆ. ಫಲಿತಾಂಶದ ಅಂಕಿ, ಅಂಶಗಳ ಲೆಕ್ಕವನ್ನೇ ತಪ್ಪಾಗಿ ಮಾಡಿರುವುದು. ಕೆಲ ವಿಷಯಗಳಲ್ಲಿ ಗರಿಷ್ಠ ಅಂಕಗಳಿಗಿಂತ ಹೆಚ್ಚು ಅಂಕ ನೀಡಿರುವಂತಹ ಪ್ರಕರಣಗಳು ಬೆಳಕಿಗೆ ಅಂತ ಕಿಡಿಕಾರಿದೆ.