ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಬಿಜೆಪಿ ಸೇರ್ಪಡೆ

ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಬಿಜೆಪಿ ಸೇರ್ಪಡೆ

ಗಾಂಧೀನಗರ: ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಬರೆದಿದ್ದಾರೆ. ಇದೀಗ ಪತಿ ಬಿಜೆಪಿಗೆ ಸೇರ್ಪಡೆಗೊಂಡ ಫೋಟೋವನ್ನು ಪತ್ನಿ, ಗುಜರಾತ್ ಶಾಸಕಿ ರಿವಾಬಾ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

ಸದ್ಯ ದೇಶಾದ್ಯಂತ ಬಿಜೆಪಿ ಸದಸ್ಯತ್ವ ಆಂದೋಲನ ಭರದಿಂದ ಸಾಗುತ್ತಿದೆ. ಇದೀಗ ರಿವಾಬ ಜಡೇಜಾ, ತಮ್ಮ ಪತಿ ಹಾಗೂ ಕ್ರಿಕೆಟಿಗ ರವೀಂದ್ರ ಜಡೇಜಾ ಬಿಜೆಪಿ ಸದಸ್ಯತ್ವ ಪಡೆದಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ 'ಎಕ್ಸ್‌' ಖಾತೆ ಮೂಲಕ ಹಂಚಿಕೊಂಡಿದ್ದಾರೆ. ರಿವಾಬ ಜಡೇಜಾ ಸದಸ್ಯತ್ವ ಅಭಿಯಾನ ಎನ್ನುವ ಹ್ಯಾಷ್‌ ಟ್ಯಾಗ್ ಜತೆಗೆ ತಮ್ಮ ಹಾಗೂ ತಮ್ಮ ಪತಿ ಜಡೇಜಾ ಅವರ ಬಿಜೆಪಿ ಸದಸ್ಯತ್ವದ ಕಾರ್ಡ್‌ ಹಂಚಿಕೊಂಡಿದ್ದಾರೆ. ಆದರೆ ಈ ಬಗ್ಗೆ ರವೀಂದ್ರ ಜಡೇಜಾ ಎಲ್ಲಿಯೂ ಅಧಿಕೃತವಾಗಿ ತಿಳಿಸಿಲ್ಲ. 

ರಿವಾಬಾ 2019ರಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದರು. 2022ರ ವಿಧಾನಸಭಾ ಚುನಾವಣೆಯಲ್ಲಿ ಜಾಮ್‌ನಗರ್ ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿದು ಆಪ್ ಅಭ್ಯರ್ಥಿ ಕರ್ಶನ್‌ಬಾಯ್ ಕಾರ್ಮುರ್ ಅವರನ್ನು ಸೋಲಿಸುವ ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಿದರು.