ಮತದಾರರನ್ನು ಕಾಂಗ್ರೆಸ್‌ನತ್ತ ಸೆಳೆಯಲು ಲಾಡ್ ಹೊಸ ತಂತ್ರ

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರನ್ನು ಶತಾಯಗತಾಯ ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಿರುವ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಮತದಾರರನ್ನು ಸೆಳೆಯಲು ಹೊಸ ತಂತ್ರ ಮಾಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ಈ ದೇಶದಲ್ಲಿ ಯಾವ್ಯಾವ ವಸ್ತುಗಳ ಬೆಲೆ ಹೆಚ್ಚಳವಾಗಿದೆ ಎಂಬುದರ ಫಲಕ ಹಿಡಿದು ಸ್ವತಃ ಲಾಡ್ ಅವರೇ ಧಾರವಾಡದ ಸುಭಾಷ ರಸ್ತೆಗಿಳಿದಿದ್ದಾರೆ. ಪೆಟ್ರೋಲ್ ಬೆಲೆ, ಗ್ಯಾಸ್ ಸಿಲಿಂಡರ್ ಬೆಲೆ, ಚಿನ್ನದ ಬೆಲೆ, 10 ವರ್ಷಗಳಲ್ಲಿ ಈ ದೇಶದ ಮೇಲೆ ಆದ ಸಾಲವೆಷ್ಟು? ಎಂಬ ಇತ್ಯಾದಿ ಮಾಹಿತಿ ಇರುವ ಬೋರ್ಡ್ ಹಿಡಿದು ಧಾರವಾಡದ ಸುಭಾಷ ರಸ್ತೆಗಿಳಿದು ಮತದಾರರನ್ನು ಕಾಂಗ್ರೆಸ್‌ನತ್ತ ಸೆಳೆಯುವ ಕೆಲಸ ಮಾಡಿದರು.
ರಸ್ತೆ ಬದಿ ಹೋಗುತ್ತಿದ್ದ ಮತದಾರರನ್ನು ಮಾತನಾಡಿಸಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದರು. ಅಲ್ಲದೇ ರಾಜ್ಯ ಸರ್ಕಾರ ಕೊಟ್ಟ ಐದು ಗ್ಯಾರಂಟಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಡೇರಿಸಲಿರುವ ಐದು ಗ್ಯಾರಂಟಿಗಳ ಬಗ್ಗೆಯೂ ವಿವರಣೆ ನೀಡಿದರು.
ಬೋರ್ಡ್‌ನಲ್ಲಿರುವ ಮಾಹಿತಿಯನ್ನು ಎಲ್ಲರಿಗೂ ತೋರಿಸಿ, ಬಿಜೆಪಿ ಅವಧಿಯಲ್ಲಿ ದುಬಾರಿಯಾದ ಎಲ್ಲ ಬೆಲೆಗಳ ಬಗ್ಗೆ ಜನರಿಗೆ ತೋರಿಸಿ ಮತದಾರರನ್ನು ತಮ್ಮತ್ತ ಸೆಳೆಯುವ ಕೆಲಸ ಮಾಡಿದರು.