ಧಾರವಾಡದಲ್ಲಿ ಗಾಳಿ ಸಮೇತ ಮಳೆ, ಹಲವೆಡೆ ನೆಲಕಚ್ಚಿದ ಮರಗಳು

ಧಾರವಾಡ: ಧಾರವಾಡದಲ್ಲಿ ಶನಿವಾರ ಗಾಳಿ ಸಮೇತ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ನೆಲಕಚ್ಚಿದ ಬಗ್ಗೆ ವರದಿಯಾಗಿದೆ.
ಬೆಳಿಗ್ಗೆಯಿಂದ ವಿಪರೀತ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದು ಗಾಳಿ ಜೊತೆಗೆ ಮಳೆ ಸುರಿಯಲಾರಂಭಿಸಿತು. ಇದರಿಂದ ಧಾರವಾಡದ ಮಾನಸಿಕ ಆಸ್ಪತ್ರೆ ಎದುರಿಗೆ ಮರ ಹಾಗೂ ಆಜಾದ್ ನಗರದಲ್ಲಿನ ಒಂದು ಮರ ನೆಲಕಚ್ಚಿವೆ. ವಿದ್ಯುತ್ ತಂತಿಗಳು ಸಹ ಹರಿದು ಬಿದ್ದಿವೆ.
ಕೆಲ ಕಾಲ ಆ ರಸ್ತೆ ಮೂಲಕ ಸಂಚರಿಸುವ ವಾಹನಗಳಿಗೆ ಅಡೆ ತಡೆ ಉಂಟಾಯಿತು. ಹೆಸ್ಕಾಂ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿ, ವಿದ್ಯುತ್ ತಂತಿಗಳನ್ನು ಸರಿಪಡಿಸುವ ಕೆಲಸ ಮಾಡಿದರು.