ಸಂಸತ್ ಒಳಗೆ ನುಗ್ಗಿದವರ ಗುರುತು ಪತ್ತೆ

ನವದೆಹಲಿ : ಲೋಕಸಭೆಗೆ ನುಗ್ಗಿ ಕಲರ್ ಸ್ಮೋಕ್ ಪ್ರಯೋಗಿಸಿದ ಇಬ್ಬರ ದುಷ್ಕರ್ಮಿಗಳ ಗುರುತು ಪತ್ತೆಯಾಗಿದೆ. ಸಾಗರ್ ಶರ್ಮಾ ಮತ್ತು ಮನೋರಂಜನ್,ನೀಲಂ,ಅಮೋಲ್ ಶಿಂದೆ ಎಂದು ಗುರುತಿಸಲಾಗಿದೆ.
ಇಂದು ಬೆಳಿಗ್ಗೆ ಸಂಸತ್ ಕಲಾಪ ನಡೆಯುತ್ತಿರುವ ವೇಳೆ ಏಕಾಏಕಿ ಇಬ್ಬರು ನುಗ್ಗಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿದ್ದಾರೆ. ಭದ್ರತಾ ಲೋಪ ಹಾಗೂ ಕಲಾಪದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನೀಲಂ (42), ಅಮೋಲ್ ಶಿಂದೆ (25), ಮೈಸೂರು ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ಮನೋರಂಜನ್ ಹಾಗೂ ಸಾಗರ್ ಶರ್ಮಾ ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಬ್ಬರು ಅನಿಲ ಹೊರಸೂಸುವಂತಹ ಬಾಟಲ್ಗಳನ್ನು ತಂದು ಸ್ಪ್ರೇ ಮಾಡಿದರು. ಇದರಿಂದ ಹಳದಿ, ಹಸಿರು, ಕೆಂಪು ಬಣ್ಣದ ಹೊಗೆ ಹರಡಿತ್ತು.
ಅಮ್ರೋಹಾ ಕ್ಷೇತ್ರದ ಸಂಸದ ಕುನ್ವರ್ ಡ್ಯಾನಿಶ್ ಅಲಿ ಅವರು ಮಾತನಾಡಿ, ಕರ್ನಾಟಕದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಇಬ್ಬರು ಪಾಸ್ ಪಡೆದುಕೊಂಡಿದ್ದಾರೆ. ಇಬ್ಬರು ಒಳ ಪ್ರವೇಶಿಸಿ ಆತಂಕವನ್ನು ಸೃಷ್ಟಿಸುತ್ತಿದ್ದಂತೆ ಕೂಡಲೇ ಸದನವನ್ನು ಮುಂದೂಡಲಾಯಿತು. ಘಟನೆಯಿಂದಾಗಿ ಕೆಲ ಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.
ಲೋಕಸಭೆ ಕಲಾಪಕ್ಕೆ ನುಗ್ಗಿದ ಇಬ್ಬರ ಬಗ್ಗೆಯು ತನಿಖೆ ನಡೆಯುತ್ತಿದ್ದು ಜೊತೆಗೆ ಸಂಸತ್ ಹೊರಗೆ ಪಟಾಕಿ ಹೊಗೆ ಹೊತ್ತಿಸಿದವರಿಗೂ, ಒಳಗಿದ್ದವರಿಗೂ ಸಂಪರ್ಕ ಇರುವ ಸಾಧ್ಯತೆ ಇದೆ. ಆದರೆ ಏಕಕಾಲದಲ್ಲಿ ಎರಡು ಕಡೆ ಭದ್ರತಾ ಲೋಪ ಸಂಭವಿಸಿರೋದು ಅಚ್ಚರಿಗೆ ಕಾರಣವಾಗಿದೆ.