ಶ್ರೀರಾಮ ಮಂದಿರ ಉದ್ಘಾಟನೆ ಮುನ್ನ 11 ದಿನಗಳ ವಿಶೇಷ ಧಾರ್ಮಿಕ ವ್ರತ ಕೈಗೊಂಡ ಪ್ರಧಾನಿ ಮೋದಿ

ಶ್ರೀರಾಮ ಮಂದಿರ ಉದ್ಘಾಟನೆ ಮುನ್ನ 11 ದಿನಗಳ ವಿಶೇಷ ಧಾರ್ಮಿಕ ವ್ರತ ಕೈಗೊಂಡ ಪ್ರಧಾನಿ ಮೋದಿ

ನವದೆಹಲಿ: ಅಯೋಧ್ಯೆ ಶ್ರೀರಾಮ ಮಂದಿರದ ಉದ್ಘಾಟನೆ ಸಮಾರಂಭ ಸಮೀಪಿಸುತ್ತಿದೆ. ಇಡೀ ದೇಶ ಐತಿಹಾಸಿಕ ಕಾರ್ಯಕ್ರಮವನ್ನು ಎದುರು ನೋಡುತ್ತಿದೆ. ರಾಮ ಲಲ್ಲಾನ ಪ್ರಾಣಪ್ರತಿಷ್ಠೆಗೆ ಇನ್ನು 11 ದಿನಗಳಷ್ಟೇ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶೇಷ ಆಡಿಯೋ ಸಂದೇಶ ನೀಡಿದ್ದಾರೆ. ಇಂದಿನಿಂದ ವಿಶೇಷ ಧಾರ್ಮಿಕ ವ್ರತಾಚರಣೆ ಅನುಸರಿಸುವುದಾಗಿ ಅವರು ಬಹಿರಂಗಪಡಿಸಿದ್ದಾರೆ. 

"ಈ ಮಹತ್ವದ ಸಂದರ್ಭಕ್ಕೆ ಸಾಕ್ಷಿಯಾಗುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನಾನು ಹಿಂದೆಂದೂ ಇಷ್ಟೊಂದು ಉತ್ಸುಕನಾಗಿರಲಿಲ್ಲ. ಜೀವನದಲ್ಲಿ ಇದೇ ಮೊದಲ ಬಾರಿಗೆ ಅಂತಹ ವಿಶೇಷ ಭಾವನೆಗಳನ್ನು ಅನುಭವಿಸುತ್ತಿದ್ದೇನೆ. ಇಂಥ ಅದ್ಭುತ ಸಮಯದಲ್ಲಿ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ವ್ಯಕ್ತಪಡಿಸುವುದು ಕಷ್ಟ" ಎಂದು ಮೋದಿ ಹೇಳಿದ್ದಾರೆ. 

ಹಿಂದೂ ಶಾಸ್ತ್ರಗಳ ಪ್ರಕಾರ, ದೇವಾಲಯಗಳಲ್ಲಿ ಪ್ರಾಣ ಪ್ರತಿಷ್ಠಾನೆಯ ಮೊದಲು ಕೆಲವು ನಿಯಮಗಳನ್ನು ಅನುಸರಿಸಬೇಕಿರುತ್ತದೆ. ಕೆಲವು ಹಿಂದೂ ಪುರಾಣಗಳು ಈ ಸಂದರ್ಭಕ್ಕೂ ಮೊದಲು ಉಪವಾಸ ವ್ರತಾಚರಣೆಯನ್ನು ಉಲ್ಲೇಖಿಸಿವೆ. ಬ್ರಹ್ಮ ಮುಹೂರ್ತದ ಸಮಯದಲ್ಲಿ ಎಚ್ಚರಗೊಳ್ಳುವ ನಿಯಮಗಳನ್ನು ವಿವರಿಸಲಾಗಿದೆ. ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಆಹಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಿರುತ್ತದೆ. ಇದೀಗ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಪ್ರಧಾನಿ ಮೋದಿ ಈ ಎಲ್ಲಾ ನಿಯಮಗಳನ್ನು ಅನುಸರಿಸಲು ನಿರ್ಧರಿಸಿದ್ದಾರೆ. 

ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಪ್ರಧಾನಿ ಮೋದಿ ಸಮ್ಮುಖದಲ್ಲಿ ನಡೆಯಲಿದೆ. ಜನವರಿ 22ರಂದು ಮಧ್ಯಾಹ್ನ 12.20ಕ್ಕೆ ಈ ಕಾರ್ಯಕ್ರಮ ಜರುಗಲಿದೆ. ಜನವರಿ 16ರಿಂದ ವೈದಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಆರ್‌ಎಸ್‌ಎಸ್ ಸಂಚಾಲಕ ಮೋಹನ್ ಭಾಗವತ್, ಯುಪಿ ಗವರ್ನರ್ ಆನಂದಿ ಬೆನ್ ಪಟೇಲ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ. ಸಮಾರಂಭಕ್ಕೆ ಸಾವಿರಾರು ಸಂತರು ಆಗಮಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.