ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್ ಕೊಹ್ಲಿ ರಾಜೀನಾಮೆ.!

ಟೀಂ ಇಂಡಿಯಾ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ಘೋಷಿಸಿದ ವಿರಾಟ್ ಕೊಹ್ಲಿ ಮತ್ತೊಂದು ನಿರ್ಧಾರ ಪ್ರಕಟಿಸಿದ್ದಾರೆ. ಐಪಿಎಲ್ 14ನೇ ಆವೃತ್ತಿಯ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ)ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯಲಿದ್ದೇನೆ ಎಂದು ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ಆರ್‌ಸಿಬಿ ಫ್ರಾಂಚೈಸಿ ಭಾನುವಾರ ವಿರಾಟ್ ಕೊಹ್ಲಿ ವಿಡಿಯೋ ಟ್ವೀಟ್ ಮಾಡಿದೆ. ಇದರಲ್ಲಿ ಕೊಹ್ಲಿ, "ಆರ್‌ಸಿಬಿಯ ನಾಯಕನಾಗಿ ಇದು ನನ್ನ ಕೊನೆಯ ಐಪಿಎಲ್. ನನ್ನ ಕೊನೆಯ ಐಪಿಎಲ್ ಪಂದ್ಯವನ್ನು ಆಡುವವರೆಗೂ ನಾನು ಆರ್‌ಸಿಬಿ ಆಟಗಾರನಾಗಿ ಮುಂದುವರಿಯುತ್ತೇನೆ. ನನ್ನ ಮೇಲೆ ವಿಶ್ವಾಸ ಇಟ್ಟಿರುವುದಕ್ಕೆ ಹಾಗೂ ನನ್ನನ್ನು ಬೆಂಬಲಿಸಿದ ಎಲ್ಲ ಆರ್‌ಸಿಬಿ ಅಭಿಮಾನಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ'' ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ 2008ರಿಂದ ಆರ್‌ಸಿಬಿಯಲ್ಲಿದ್ದಾರೆ. 2013ರಿಂದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. 7 ಪಂದ್ಯಗಳಲ್ಲಿ 10 ಅಂಕವನ್ನು ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆರ್‌ಸಿಬಿ ಈಬಾರಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಬೆಂಗಳೂರುವು ತಂಡ ಸೋಮವಾರ ಕೆಕೆಆರ್ ಅನ್ನು ಎದುರಿಸಲಿದೆ.