ಧಾರವಾಡ: ಬರ ಪರಿಹಾರ ನೇರವಾಗಿ ರೈತರ ಖಾತೆಗೆ ಮೊತ್ತ ಜಮೆ-ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಧಾರವಾಡ: ಜಿಲ್ಲೆಯ ಸುಮಾರು 1 ಲಕ್ಷ ರೈತರಿಗೆ ಬರ ಪರಿಹಾರ ನೀಡಲಾಗುತ್ತಿದ್ದು ಅನುದಾನದ ಕೊರತೆಯಿಲ್ಲ. ನೇರವಾಗಿ ಫಲಾನುಭವಿ ರೈತರ ಖಾತೆಗೆ ಮೊತ್ತ ಜಮಾ ಆಗಲಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸದ್ಯ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಕೊರತೆಯಿಲ್ಲ. ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದರು.
ಅವಶ್ಯ ಬಿದ್ದರೆ ಇತರ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು. ಏಪ್ರಿಲ್ - ಮೇ ತಿಂಗಳಲ್ಲಿ ಬೋರ್‌ವೆಲ್ ಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುವುದು. ಸದ್ಯಕ್ಕೆ ಜಿಲ್ಲೆಯ ಯಾವ ಭಾಗದಲ್ಲಿಯೂ ಮೇವಿನ ಕೊರತೆಯಿಲ್ಲ. ಆದರೂ ಮುಂಜಾಗೃತಾ ಕ್ರಮವಾಗಿ ಮೇವಿಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.