ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪಬ್ಲಿಕ್ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ನವೆಂಬರ್ 29ರಿಂದ ನಡೆಸಲು ನಿರ್ಧಡಿಸಿದ್ದ ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪಬ್ಲಿಕ್ ಪರೀಕ್ಷೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯು ಮುಂದೂಡಿದೆ.
ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆಯನ್ನು ನವೆಂಬರ್ 29ರಿಂದ ಪಬ್ಲಿಕ್ ಪರೀಕ್ಷೆಯಾಗಿ ನಡೆಸಲು ಮುಂದಾದ ಕ್ರಮಕ್ಕೆ ವಿದ್ಯಾರ್ಥಿಗಳಿಂದ ವಿರೋಧ, ಪ್ರತಿಭಟನೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೆ ಉಪನ್ಯಾಸಕರಿಂದ ಕೆಲ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷೆಗಳನ್ನು ಮುಂದೂಡಲು ತೀರ್ಮಾನಿಸಿದೆ. ಜೊತೆಗೆ ಜಿಲ್ಲೆ, ತಾಲ್ಲೂಕು ಕೇಂದ್ರಗಳ ಬದಲು ಆಯಾ ಕಾಲೇಜುಗಳಲ್ಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಡಲು ಇಲಾಖೆ ಒಪ್ಪಿದೆ.
ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ ನಿಗದಿ ಸಂಬಂಧ ಗುರುವಾರ ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೊಂದಿಗೆ ಪಿಯು ಇಲಾಖೆಯ ನಿರ್ದೇಶಕರಾದ ಆರ್.ಸ್ನೇಹಲ್ ಅವರು ಚರ್ಚಿಸಿ ನಿರ್ಧರಿಸಲಿದ್ದಾರೆ. ಬಳಿಕ ಅಧಿಕೃತ ಸುತ್ತೋಲೆ ಹೊರಬೀಳುವ ಸಾಧ್ಯತೆ ಇದೆ.